ಗದಗ:– ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ನಿಧನಕ್ಕೆ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿಧ್ಧರಾಮ ಶ್ರೀಗಳ ಸಂತಾಪ ಸೂಚಿಸಿದ್ದಾರೆ.
ಡಾ. ಬಿ ಎಸ್ ದ್ವಾರಕೀಶ ಅವರು ವಿಧಿವಶರಾದುದು ಕರ್ನಾಟಕ್ಕೆ ತುಂಬಲಾರದ ನಷ್ಟ. ಅವರ ಅಗಲುವಿಕೆಯಿಂದ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಉಜ್ವಲ ನಕ್ಷತ್ರ ಕಣ್ಮರೆಯಾದಂತಾಗಿದೆ. ನಟ, ನಿರ್ಮಾಪಕ, ನಿರ್ದೇಶಕರಾಗಿ ದ್ವಾರಕೀಶ ಅವರು ಚಲನಚಿತ್ರ ರಂಗದಲ್ಲಿ ಅಪೂರ್ವವಾದ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಶ್ರೇಷ್ಠ ನಟರಾದ ಡಾ. ರಾಜಕುಮಾರ, ಡಾ. ವಿಷ್ಣುವರ್ಧನ ಅವರ ಜೊತೆಗೆ ಅಭಿನಯಿಸಿ ಹಾಸ್ಯನಟರಾಗಿ ಗುರುತಿಸಿಕೊಂಡವರು. ತಮ್ಮ ಅಭಿನಯದಿಂದ ಅವರು ಹೊಟ್ಟೆ ಹುಣ್ಣಾಗುವಂತೆ ಪ್ರೇಕ್ಷಕರನ್ನು ನಗಿಸುತ್ತಿದ್ದರು. ಅಶ್ಲೀಲತೆಗೆ, ದ್ವಂದ್ವಾರ್ಥಕ್ಕೆ ಎಡೆಮಾಡಿಕೊಟ್ಟವರಲ್ಲ. ಅವರು ಮೇಯರ್ ಮುತ್ತಣ್ಣ, ಕುಳ್ಳ-ಕುಳ್ಳಿ, ಕಿಟ್ಟು-ಪುಟ್ಟು, ಭಾಗ್ಯವಂತರು, ಇಂದಿನ ರಾಮಾಯಣ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ
ಆ ಮೂಲಕ ನಮ್ಮ ನಾಡಿನ ಒಬ್ಬ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ರು. ಅವರ ಪ್ರತಿಭೆ, ಕಲಾನೈಪುಣ್ಯತೆ ಗುರುತಿಸಿ ಬೆಂಗಳೂರು ವಿವಿ ಅವರಿಗೆ ಗೌರವ ಡಾಟ್ಟರೇಟ್ ಪದವಿ ನೀಡಿ ಗೌರವಿಸಿದೆ. ನಾಡಿನ ಅನೇಕ ಸಂಘ ಸಂಸ್ಥೆಗಳು ಸರಕಾರ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇಂತಹ ಕಾಲಾಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರದ ವ್ಯಕ್ತಿ ಇಂದು ನಮ್ಮನ್ನಗಲಿರೋದು ಅತ್ಯಂತ ದುಃಖದ ಸಂಗತಿ. ಅವರ ಆತ್ಮಕ್ಕೆ ಬಸವಾದಿ ಶಿವಶರಣರು ಚಿರಶಾಂತಿಯನ್ನು ದಯಪಾಲಿಸಲಿ. ಸರಕಾರ ಅವರ ಸ್ಮರಣೆಯಲ್ಲಿ ಯೋಜನೆ ಹಾಕಿಕೊಂಡು ಅವರ ಹೆಸರನ್ನು ಚಿರಸ್ಥಾಯಿಗೊಳಿಸೋ ಕಾರ್ಯ ಮಾಡಲಿ ಎಂದು ಡಾ. ತೋಂಟದ ಸಿಧ್ಧರಾಮ ಶ್ರೀಗಳು ಸಂತಾಪ ಸೂಚಿಸಿದ್ದಾರೆ.