ಹುಬ್ಬಳ್ಳಿ: ಅಯೋಧ್ಯೆಯಲ್ಲಿ (Ayodhya) ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಭಾಗವಾಗಿ ಬಿಜೆಪಿ ದೇಶಾದ್ಯಂತ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿಗೊಳಿಸುವ ʻಸ್ವಚ್ಛ ತೀರ್ಥʼ ಅಭಿಯಾನ (Swachh Teerth Campaign) ಹಮ್ಮಿಕೊಂಡಿದೆ.
ಪಕ್ಷದ ನಾಯಕರು (BJP Leaders), ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ದೇಶದ ವಿವಿಧ ಭಾಗಗಳಲ್ಲಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖ್ಯಾತ ಬಾಲಿವುಡ್ ನಟರೂ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರುವಾಗ ದೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿಸಲು ಬಿಜೆಪಿ ಈ ಅಭಿಯಾನ ಕೈಗೊಂಡಿದೆ.
ಕರ್ನಾಟಕದಲ್ಲಿಯೂ ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಸೋಮವಾರ ಹುಬ್ಬಳ್ಳಿಯ ಸಾಯಿನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ಮೂಲ ಗದ್ದುಗೆ ಮಠದ ಆವರಣದಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ತಮ್ಮ ಸೇವೆ ಸಲ್ಲಿದ್ದಾರೆ.
ಬಿಜೆಪಿ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾನಗರ ಪಾಲಿಕೆಯ ಸದಸ್ಯ ಸಂತೋಷ್ ಚೌಹಾಣ್ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ವೇಳೆ ಕೈಜೋಡಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.