ಹುಬ್ಬಳ್ಳಿ: ಬುಧವಾರ ಸಂಜೆಯಿಂದ ಆರಂಭಗೊಂಡ ಮಳೆ ಗುರುವಾರ ಬೆಳಗಿನ ಜಾವಕ್ಕೆ ರಭಸದೊಂದಿಗೆ ಬಿದ್ದ ಪರಿಣಾಮ ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅನೇಕ ಮುಖ್ಯ ರಸ್ತೆಗಳು ಕೆರೆಯಂತಾಗಿವೆ. ಒಂದೆರಡು ಕಡೆ ಮರಗಳು ಧರೆಗುರಳಿವೆ ಬುಧವಾರ ಸಾಯಂಕಾಲ ಜೋರಾಗಿ ಬಿದ್ದ ಮಳೆ ರಾತ್ತಿ ವೇಳೆಗೆ ಜಿಟಿ, ಜಿಟಿಯಾಗಿ ಬೀಳಲಾರಂಭಿಸಿತು. ಗುರುವಾರ ಬೆಳಗಿನ ಜಾವದಿಂದಲೇ ರಭಸದ ಮಳೆ ಬಿದ್ದಿದೆ. ರಭಸದ ಮಳೆಯಿಂದಾಗಿ ನವನಗರದ ಪಂಚಾಕ್ಷರಿ ನಗರದ ಒಂದೆರಡು ಮನೆಗಳಿಗೆ ನೀರು ನುಗ್ಗಿದೆ.
ಹಳೇ ಹುಬ್ಬಳಿಯ ಗಣೇಶ ಕಾಲೋನಿ, ಆನಂದನಗರ, ಶಿಮ್ಲಾನಗರ ಹಾಗೂ ಪಿ.ಬಿ.ರಸ್ತೆ, ದಾಜಿಬಾನಪೇಟೆ, ವಿದ್ಯಾನಗರ ಇನ್ನಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಶ್ರೀನಗರ ಕ್ರಾಸ್ ಇನ್ನಿತರ ಕಡೆಗಳಲ್ಲಿ ಬಿಆರ್ ಟಿಎಸ್ ಬಸ್ ಮಾರ್ಗದಲ್ಲಿ ಅಪಾರ ಪ್ರಮಾಣದ ನೀರು ನಿಂತದ್ದು ಕಂಡು ಬಂದಿತು. ರಾಮನಗರ, ಅಶೋಕ ನಗರದಲ್ಲಿ ಎರಡು ಮರಗಳು ನೆಲಕ್ಕುರಳಿವೆ. ಇದುವರೆಗೂ ಯಾವುದೇ ಹಾನಿ ಬಗ್ಗೆ ಇನ್ನು ವರದಿಯಾಗಿಲ್ಲ.