ನವದೆಹಲಿ: ಭಾರತದ ಕುಸ್ತಿಪಟುಗಳು ತಮ್ಮ ಪ್ರಶಸ್ತಿ ವಾಪ್ಸಿ ಅಭಿಯಾನವನ್ನು ಮುಂದುವರಿಸಿದ್ದಾರೆ. ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್ ರತ್ನ, ಅರ್ಜುನ ಪ್ರಶಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.
ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪ್ರಧಾನಿಗೆ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದಕ್ಕೂ ಮುಂಚೆ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲವು ದಿನಗಳ ನಂತರ ಬಜರಂಗ್ ಪುನಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದರು.
यह दिन किसी खिलाड़ी के जीवन में न आए। देश की महिला पहलवान सबसे बुरे दौर से गुज़र रही हैं। #vineshphogat pic.twitter.com/bT3pQngUuI
— Bajrang Punia 🇮🇳 (@BajrangPunia) December 30, 2023
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಕುಸ್ತಿಪಟು ಫೋಗಟ್, 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು.
ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆದ್ದಿದ್ದಕ್ಕೆ ಫೋಗಟ್, ಎಂಎಸ್ ಮಲ್ಲಿಖ್, ಬಜರಂಗ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.