ಕೋಲ್ಕತ್ತಾ: ಕೋಲ್ಕತ್ತಾದ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ನಲ್ಲಿ 10 ವರ್ಷದ ಬಾಲಕಿಯಲ್ಲಿ ‘ಚೈನೀಸ್ ನ್ಯುಮೋನಿಯಾ’ ಎಂಬ ಅಪರೂಪದ ಸೋಂಕು ಪತ್ತೆಯಾಗಿದೆ. ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯನ್ನು ಪಾರ್ಕ್ ಸರ್ಕಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ, ವೈದ್ಯರು ಬಾಲಕಿ ಅಡೆನೊವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕಿಸಿದ್ದರು. ಆದರೆ ಸ್ವ್ಯಾಬ್ ಮಾದರಿ ಪರೀಕ್ಷೆಯು ಆಕೆ ಮೈಕೋಪ್ಲಾಸ್ಮಾ ನ್ಯುಮೋನಿಯಾದಿಂದ ಬಳಲುತ್ತಿದ್ದಾಳೆ ಎಂಬುದನ್ನು ದೃಢಪಡಿಸಿದೆ. ಬಾಲಕಿ, ದಕ್ಷಿಣ ಕೋಲ್ಕತ್ತಾದ ಬಾನ್ಸ್ದ್ರೋನಿ ನಿವಾಸಿಯಾಗಿದ್ದಾಳೆ.
ಚೈನೀಸ್ ನ್ಯುಮೋನಿಯಾದಲ್ಲಿ ಬ್ಯಾಕ್ಟೀರಿಯಾಗಳು ರೋಗಿಗಳಲ್ಲಿ ತೀವ್ರವಾದ ನ್ಯುಮೋನಿಯಾಕ್ಕೆ ಕಾರಣವಾಗುತ್ತವೆ. ಇದು ಹೆಚ್ಚಿನ ಜ್ವರ, ಕೆಮ್ಮು ಮತ್ತು ಉಸಿರಾಟದ ರೋಗ ಲಕ್ಷಣವನ್ನು ತೋರಿಸುತ್ತದೆ. ಭಾರತದಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾ-ಸೋಂಕಿತ ಪ್ರಕರಣಗಳ ಹರಡುವಿಕೆ ಹೆಚ್ಚಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು. ಏಮ್ಸ್-ದೆಹಲಿಯ ವೈದ್ಯರು ಕೆಲವು ವಾರಗಳ ಹಿಂದೆ ಕನಿಷ್ಠ ಏಳು ರೋಗಿಗಳಲ್ಲಿ, ಹೆಚ್ಚಾಗಿ ಮಕ್ಕಳಲ್ಲಿ ಈ ಸೋಂಕನ್ನು ಗಮನಿಸಿದ್ದಾರೆ.
Stomach Pain: ತಿಂದ ಕೂಡಲೇ ಹೊಟ್ಟೆ ನೋವಾಗುತ್ತ.? ಹಾಗಾದ್ರೆ ಈ ಮನೆ ಮದ್ದು ಟ್ರೈ ಮಾಡಿ
‘ಮೈಕೋಪ್ಲಾಸ್ಮಾ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಪ್ರಾಥಮಿಕವಾಗಿ ಉಸಿರಾಟದ ಒಳಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಮಾತ್ರವಲ್ಲ ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳಂತಹ ಇತರ ಅಂಗಗಳಿಗೂ ತೊಂದರೆಯನ್ನುಂಟು ಮಾಡುತ್ತದೆ. ನಂತರದ ದಿನಗಳಲ್ಲಿ ತೀವ್ರ ಅನಾರೋಗ್ಯವನ್ನು ಉಂಟುಮಾಡಬಹುದು. ಈ ಸೋಂಕು ಪ್ರತಿಜೀವಕಗಳಿಗೆ ಉತ್ತಮವಾಗಿ ಪ್ರತಿಕ್ರಿಯಿಸುವ ಕಾರಣ ಭಯಪಡುವ ಅಗತ್ಯವಿಲ್ಲ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ’ ಎಂದು ಕೋಲ್ಕತ್ತಾದ ಪೀಡಿಯಾಟ್ರಿಕ್ ಮೆಡಿಸಿನ್ ಮುಖ್ಯಸ್ಥ ಪ್ರೊಫೆಸರ್ ಜಯದೇಬ್ ರೇ ಹೇಳಿದ್ದಾರೆ.