ಇಂದು ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರ ಹುಟ್ಟುಹಬ್ಬ. ಒಂದ್ಕಡೆ ಪುನೀತ್ ರಾಜ್ ಕುಮಾರ್ ನೆನಪಿಲ್ಲಿ ಕರುನಾಡ ಅವರನ್ನು ಸಂಭ್ರಮಿಸುತ್ತಿದೆ. ಮತ್ತೊಂದು ಕಡೆ ನವರಸ ನಾಯಕ ಹಾಗೂ ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಕೂಡ ಜನ್ಮದಿನದ ಸಂತಸದಲ್ಲಿದ್ದಾರೆ. ಚಿತ್ರರಂಗದಲ್ಲಿ ನಟನಾಗಿ, ಕಾಮಿಡಿಯನ್ ಆಗಿ, ಖಳನಾಯಕನಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದಿರುವ ಅವರು ರಾಜಕೀಯ ರಂಗಕ್ಕೂ ಇಳಿದಿರುವುದು ಗೊತ್ತೇ. ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರ 62ನೇ ವಸಂತಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
ಪ್ರಧಾನಿ ಮೋದಿ ಕಡೆಯಿಂದ ಬಂದ ಪತ್ರ ಕಂಡು ಜಗ್ಗೇಶ್ ಫುಲ್ ಖುಷಿಯಾಗಿದ್ದಾರೆ. ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕರು ನರೇಂದ್ರ ಮೋದಿರವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ ‘ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು” ನನ್ನ ಸಲಹುತ್ತಿರುವ ಸರ್ವರಿಗು” ಎಂದು ಬರೆದು ಪತ್ರ ಹಂಚಿಕೊಂಡಿದ್ದಾರೆ.
https://x.com/Jaggesh2/status/1901429680571605055
ಮೋದಿ ಕಳಿಸಿದ ಪತ್ರದಲ್ಲಿ ಏನಿದೆ?
ಮಾರ್ಚ್ 17 ರಂದು ಬರುವ ನಿಮ್ಮ ಹುಟ್ಟುಹಬ್ಬಕ್ಕೆ ಶುಭಾಶಯಗಳು. ಹಿಂದಿನ ಸಾಧನೆಗಳಿಂದ ಸ್ಫೂರ್ತಿ ಪಡೆದು, ಬೇರೆಯವರ ಬದುಕಿನಲ್ಲಿ ಬದಲಾವಣೆ ತರಲು ಈ ಹುಟ್ಟುಹಬ್ಬದ ಸಂದರ್ಭವನ್ನು ಬಳಸಿಕೊಳ್ಳಿ. ನಿಮ್ಮ ಶ್ರಮ ಮತ್ತು ಬದ್ಧತೆ ದೇಶದ ಪ್ರಗತಿಗೆ ತುಂಬಾ ಮುಖ್ಯ. ನಿಮ್ಮ ನಿರಂತರ ಪ್ರಯತ್ನಗಳು ದೇಶವನ್ನು ಇನ್ನಷ್ಟು ಮುಂದೆ ಕೊಂಡೊಯ್ಯುತ್ತವೆ ಎಂಬ ನಂಬಿಕೆ ನನಗಿದೆ. ಮುಂದಿನ ವರ್ಷವು ನಿಮಗೆ ಸಂತೋಷ, ಶಾಂತಿ ಮತ್ತು ಆರೋಗ್ಯ ತರಲಿ. ಶುಭಾಶಯಗಳೊಂದಿಗೆ, ನಿಮ್ಮ, ಎಂದು ಬರೆದಿದ್ದಾರೆ.