ಎರಡು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ವಾಪಸ್ ಆಗಿದ್ದಾರೆ. ಈ ವೇಳೆ ಟ್ರಂಪ್ ಜೊತೆ ಹಲವು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರ ಸಂಧಾನ, ಮಾತುಕತೆಯ ಕೌಶಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಸ್ಪರ ಸುಂಕಗಳ ಘೋಷಣೆ ಮತ್ತು ವಿಶ್ವದ ಅತಿ ಹೆಚ್ಚು ವ್ಯಾಪಾರ ಸುಂಕಗಳನ್ನು ವಿಧಿಸಿದ್ದಕ್ಕಾಗಿ ಭಾರತದ ಕುರಿತ ಟೀಕೆಗಳ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರ ಮಾತುಕತೆಯ ಕೌಶಲ್ಯವನ್ನು ಶ್ಲಾಘಿಸಿದರು.
ಅಮೇರಿಕಾದ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ವಿಷಯವಾಗಿ ಮಾತನಾಡಿರುವ ಟ್ರಂಪ್, ಸಾಂಪ್ರದಾಯಿಕವಾಗಿ, ಭಾರತ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಾಸ್ತವವಾಗಿ ಇನ್ನೂ ಕೆಲವು ಸಣ್ಣ ದೇಶಗಳು ಹೆಚ್ಚು ವಿಧಿಸುತ್ತದೆ. ಆದರೆ ಭಾರತ ಭಾರಿ ಸುಂಕಗಳನ್ನು ವಿಧಿಸುತ್ತದೆ. ಭಾರತದಲ್ಲಿ-ತೆರಿಗೆ ತುಂಬಾ ಹೆಚ್ಚಾಗಿದ್ದರಿಂದ ಹಾರ್ಲೆ-ಡೇವಿಡ್ಸನ್ ತಮ್ಮ ಮೋಟಾರ್ಬೈಕ್ಗಳನ್ನು ಭಾರತದಲ್ಲಿ ಮಾರಾಟ ಮಾಡಲು ಸಾಧ್ಯವಾಗದಿದ್ದ ಸನ್ನಿವೇಶ ನನಗೆ ನೆನಪಿದೆ, ಸುಂಕ ತುಂಬಾ ಹೆಚ್ಚಾಗಿದೆ” ಎಂದು ಶ್ವೇತಭವನದಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ಸಭೆಯ ನಂತರ ಟ್ರಂಪ್ ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಸುಂಕದ ವಿಷಯಕ್ಕೆ ಬಂದಾಗ ಯಾರು ಉತ್ತಮ ಸಂಧಾನಕಾರರು ಎಂದು ಅಮೆರಿಕ ಅಧ್ಯಕ್ಷರನ್ನು ಕೇಳಿದಾಗ, ಅವರೇ, ಪ್ರಧಾನಿ ನರೇಂದ್ರ ಮೋದಿಯೇ ಅತ್ಯುತ್ತಮ ಸಂಧಾನಕಾರ ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಸಮಾಲೋಚನಾ ಕೌಶಲ್ಯವನ್ನು ಗುರುತಿಸಿದ ಟ್ರಂಪ್, “ಅವರು ನನಗಿಂತ ಹೆಚ್ಚು ಕಠಿಣ ಸಮಾಲೋಚಕರು (ಸಂಧಾನಕಾರರು, ಮತ್ತು ಅವರು ನನಗಿಂತ ಉತ್ತಮ ಸಮಾಲೋಚಕರು. ಸ್ಪರ್ಧೆ ಇಲ್ಲ” ಎಂದಿದ್ದಾರೆ.