ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರದಲ್ಲಿ (Ayodhya Ram Mandir) ಜನವರಿ 22 ರಂದು ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆ (Pran Pratistha) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ವ್ರತ ಕೈಗೊಂಡಿದ್ದಾರೆ. ವ್ರತದ ಭಾಗವಾಗಿ ಮೋದಿಯವರು (Narendra Modi) ಪ್ರತಿನಿತ್ಯ ಒಂದು ಗಂಟೆಗೂ ಅಧಿಕ ಕಾಲ ವಿಶೇಷ ಮಂತ್ರ ಪಠಣ ಮಾಡುತ್ತಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಗಳು ತಿಳಿಸಿವೆ.
11 ದಿನಗಳ ಕಠಿಣವ್ರತ ಕೈಗೊಂಡಿರುವ ಪ್ರಧಾನಿ ಮೋದಿ ಪ್ರತಿದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಿ, ಸುಮಾರು 1 ಗಂಟೆ 11 ನಿಮಿಷಗಳ ಕಾಲ ಮಂತ್ರ ಪಠಣ ಮಾಡುತ್ತಿದ್ದಾರೆ. ಕೆಲ ಆಧ್ಯಾತ್ಮಿಕ ಮಹಾ ಗುರುಗಳಿಂದ ಪ್ರಧಾನಿ ಈ ಮಂತ್ರವನ್ನು ಸ್ವೀಕರಿಸಿದ್ದರು. ಅವರ 11 ದಿನಗಳ ವ್ರತದಲ್ಲಿ ಈ ವಿಧಾನವು ಅತ್ಯಂತ ನಿರ್ಣಾಯಕವಾಗಿದೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೇ ವ್ರತದ ಭಾಗವಾಗಿ ಮೋದಿಯವರು (Narendra Modi) ಕೇವಲ ಎಳನೀರು ಸೇವನೆ ಮಾಡುತ್ತಿದ್ದಾರೆ. ಕೇವಲ ಹೊದಿಕೆಯೊಂದಿಗೆ ನೆಲದ ಮೇಲೆ ಮಲಗುತ್ತಿದ್ದಾರೆ. 11-ದಿನಗಳ ಈ ವಿಶೇಷ ವ್ರತದಲ್ಲಿ, ಧ್ಯಾನ ಮತ್ತು ವಿಶೇಷ ಸಾತ್ವಿಕ ಆಹಾರದೊಂದಿಗೆ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುವುದು ಸೇರಿದೆ. ಈ ನಿಯಮಗಳ ಪ್ರಕಾರ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಲವಾರು ಇತರ ವಸ್ತುಗಳ ಸೇವನೆಯನ್ನು ನಿರ್ಬಂಧಿಸಲಾಗುತ್ತದೆ. ಮೋದಿಯವರು ಈ ನಿಯಮಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.