ಅಯೋಧ್ಯೆ: ಬರೋಬ್ಬರಿ 500 ವರ್ಷಗಳ ಕಾಯುವಿಕೆಗೆ ಇದೀಗ ಅಂತ್ಯ ಬಿದ್ದಿದೆ. ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಮೂಲಕ 500 ವರ್ಷಗಳ ಬಳಿಕ ಬಾಲರಾಮ ತನ್ನ ಸ್ವಸ್ಥಾನಕ್ಕೆ ಮರಳಿದ್ದಾರೆ.
12 ಗಂಟೆ 30 ನಿಮಿಷ 32 ಸೆಕೆಂಡ್ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ (ʼಅಭಿಜಿತ್ʼ ಅಂದ್ರೆ ʼಜಯಶಾಲಿʼ ಎಂದರ್ಥ) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ (Pran Prathistha ceremony) ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದಕ್ಕೂ ಮುನ್ನ ಪ್ರಧಾನಿಯವರ ಸಾರಥ್ಯದಲ್ಲಿ ಮೂಲ ವಿಗ್ರಹದ ಎದುರು ವಿಧಿ-ವಿಧಾನಗಳನ್ನು ನೆರವೇರಿತು. ಗರ್ಭಗುಡಿಯಲ್ಲಿ ಪೂಜಾ-ಕೈಂಕರ್ಯಗಳು ನಡೆದವು. ಬಳಿಕ ಬಾಲರಾಮನ ಹಣೆಗೆ ಮೋದಿ ತಿಲಕವಿಟ್ಟರು. ಈ ಸಂದರ್ಭದಲ್ಲಿ ಶಂಖ, ಜಾಗಟೆಗಳು ಮೊಳಗಿದವು.
ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ಗರ್ಭಗುಡಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಆರ್ಎಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಅಯೋಧ್ಯೆಯ ಪ್ರಧಾನ ಅರ್ಚಕರು ಉಪಸ್ಥಿತರಿದ್ರು.
ಈ ದಿನಕ್ಕಾಗಿ ಪ್ರಧಾನಿಯವರು ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಈ ನಡುವೆ ಹಲವಾರು ದೇಗುಲಗಳಿಗೆ ತೆರಳಿ ಪೂಜೆಯನ್ನೂ ಸಲ್ಲಿಸಿದ್ದರು. ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ ಸಾವಿರಾರು ಮಂದಿ ಈ ಕ್ಷಣಕ್ಕೆ ಸಾಕ್ಷಿಯಾದರು. ಒಟ್ಟಿನಲ್ಲಿ ಇಂದು ಎಲ್ಲೆಲ್ಲೂ ಜೈಶ್ರೀ ರಾಮ್ ಘೋಷಣೆ ಮೊಳಗುತ್ತಿದೆ. ಎಲ್ಲಾ ಕಡೆಯೂ ಶ್ರೀರಾಮನ ಗುಣಗಾನ ನಡೆಯುತ್ತಿದೆ.