ಬೆಂಗಳೂರು:- ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಸಿಎಂ ಭೇಟಿಗೆ ಪ್ರಧಾನಿ ಕಾಲಾವಕಾಶ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ವರ್ಷಾನುಗಟ್ಟಲೆ ಅವಕಾಶ ಕೊಟ್ಟಿರಲಿಲ್ಲ. ರಾಜ್ಯದ ಸಮಸ್ಯೆಗಳು, ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಅವಕಾಶ ಕೊಟ್ಟಿರಲಿಲ್ಲ. ಈಗ ಕೊನೆ ಗಳಿಗೆಯಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಚುನಾವಣಾ ನೀತಿ ಸಂಹಿತೆ ಬರುತ್ತಿತ್ತು. ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು, ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು. ಈ ರೀತಿ ಕಡೆಗಣಿಸಿರುವ ಇತಿಹಾಸವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದರು.
ಈ ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿ ನಡೆಸಿಕೊಂಡಿರಲಿಲ್ಲ. ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿಲ್ಲ. ಪ್ರಧಾನಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕಡೆಗಣಿಸುತ್ತಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಸಿಗಬಾರದು ಅಂತ ಅವರ ಮನಸ್ಥಿತಿ ಇದ್ದಂತೆ ಕಾಣುತ್ತಿದೆ ಎಂದು ಹೇಳಿದರು.