ದೇವನಹಳ್ಳಿ:- ಜಾಗತಿಕ ಅಗತ್ಯ ಪೂರೈಸುವ ನಗರ ಬೆಂಗಳೂರು ಎಂದು PM ಮೋದಿ ಹೇಳಿದ್ದಾರೆ.
ಇಂದು ನಗರದಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೊದಲು ಬೆಂಗಳೂರು ಬಗ್ಗೆ ಮೆಚ್ಚುಗೆ ಮಾತನ್ನಾಡಿದರು. ಜಾಗತಿಕ ಅಗತ್ಯಗಳನ್ನು ಪೂರೈಸುವ ನಗರ ಬೆಂಗಳೂರು ಆಗಿದೆ. ಈ ಬಿಐಇಟಿಸಿ ಕೇಂದ್ರ ವೈಮಾನಿಕ ಕ್ಷೇತ್ರಕ್ಕೆ ದೊಡ್ಡ ಬಲ ಕೊಡಲಿದೆ. ಈ ಕೇಂದ್ರ ಭಾರತದ ಮೇಲೆ ವಿಶ್ವದ ಭರವಸೆ ಇನ್ನಷ್ಟು ಗಟ್ಟಿ ಮಾಡಲಿದೆ ಎಂದರು.
ಒಂದು ದಿನ ಈ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶ್ವದ ಭವಿಷ್ಯ ರೂಪಿಸಲಿದೆ. ಕರ್ನಾಟಕದ ಜನತೆಗೂ ಇವತ್ತು ಮಹತ್ತರ ದಿನ. ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಲಾಯ್ತು. ಕರ್ನಾಟಕ ಜಾಗತಿಕ ರಂಗದಲ್ಲಿ ಹೆಚ್ಚು ಹೆಚ್ಚು ವಿಕಸಿತ ಆಗ್ತಿದೆ. ವೈಮಾನಿಕ ರಂಗದಲ್ಲಿ ಹೊಸ ಕೌಶಲ್ಯ ಕಲಿಯಲು ಹೆಚ್ಚು ಅವಕಾಶಗಳು ಸಿಕ್ತಿವೆ. ವೈಮಾನಿಕ ರಂಗದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗತೊಡಗಿವೆ ಎಂದು ಹೇಳಿದರು.
ಭಾರತ ಮಹಿಳಾ ಪೈಲಟ್ ಗಳ ವಿಚಾರದಲ್ಲಿ ಮುಂಚೂಣಿಯಲ್ಲಿದೆ.
15% ಮಹಿಳಾ ಪೈಲಟ್ ಗಳು ದೇಶದಲ್ಲಿದ್ದಾರೆ. ಜಾಗತಿಕ ಪ್ರಮಾಣಕ್ಕಿಂತ ಇದು ಮೂರು ಪಟ್ಟು ಹೆಚ್ಚು ಆಗಿದೆ. ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಅವಕಾಶ ಸಿಗಲಿದೆ. ಪೈಲಟ್ ಆಗುವ ಹೆಣ್ಣುಮಕ್ಕಳ ಕನಸು ನನಸಾಗಲಿದೆ. ಚಂದ್ರಯಾನ ಮೂಲಕ ಯಾವ ದೇಶವೂ ಮಾಡದ ಸಾಧನೆ ಮಾಡಿದ್ದೇವೆ. ನಮ್ಮ ಸ್ಥಾನ ವಿಶ್ವದಲ್ಲಿ ಇನ್ನೂ ಮೇಲಿನ ಸ್ತರಕ್ಕೆ ಈ ಮೂಲಕ ಹೋಗಿದೆ ಎಂದು ಮೋದಿ ತಿಳಿಸಿದರು.