ಸಿಂಗಪುರ: ಸಿಂಗಪುರದಲ್ಲಿ ಚೀನಾದ ಜನತೆ ಹೊಸವರ್ಷ ‘ಡ್ರ್ಯಾಗನ್’ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಈ ವರ್ಷದಲ್ಲಿ ಮಕ್ಕಳು ಹುಟ್ಟಿದರೆ ಮಂಗಳಕರ ಎನ್ನುವ ನಂಬಿಕೆ ಅಲ್ಲಿನ ಜನಗಳಲ್ಲಿ ಇದೆ. ಈ ಕಾರಣಕ್ಕೆ ಪ್ರಧಾನ ಮಂತ್ರಿ ಲೀ ಸಿಯೆನ್ ಲೂಂಗ್ ಈ ವರ್ಷ ಮಕ್ಕಳನ್ನು ಪಡೆಯುವಂತೆ ಸಿಂಗಪುರದ ದಂಪತಿಗಳಿಗೆ ಸಲಹೆ ನೀಡಿದ್ದಾರೆ.
ಚೀನಾ ಹೊಸ ವರ್ಷದ ವಾರ್ಷಿಕ ಸಂದೇಶ ನೀಡುವ ವೇಳೆ ಮಾತನಾಡಿದ ಲೀ, ‘ಡ್ರ್ಯಾಗನ್ ವರ್ಷ ಎನ್ನುವುದು ಶಕ್ತಿ ಮತ್ತು ಅದೃಷ್ಟದ ಸಂಕೇತ. ಹಾಗಾಗಿ ಯುವ ಜೋಡಿಗಳು ನಿಮ್ಮ ಕುಟುಂಬಕ್ಕೆ ‘ಪುಟ್ಟ ಡ್ರ್ಯಾಗನ್’ ಅನ್ನು ಸೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ. ಕುಟುಂಬಕ್ಕೆ ನಮ್ಮ ಸರ್ಕಾರ ಬೆಂಬಲವಿದೆ’ ಎಂದಿದ್ದಾರೆ.
ನಾವು ‘ಸಿಂಗಪುರ್ ಮೇಡ್ ಫಾರ್ ಫ್ಯಾಮಿಲಿಸ್’ ಅನ್ನು ನಿರ್ಮಿಸುತ್ತೇವೆ. ಮುಂದೆಯೂ ನಿಮ್ಮ ಮದುವೆ ಮತ್ತು ಪೋಷಕತ್ವದ ಆಕಾಂಕ್ಷೆಗಳನ್ನು ಬೆಂಬಲಿಸುತ್ತೇವೆ ಎಂದು ಲೀ ಹೇಳಿದ್ದಾರೆ. ಸಾಕಷ್ಟು ದಂಪತಿ ತಮ್ಮದೇ ಆದ ಕಾರಣಗಳಿಗಾಗಿ ಮಕ್ಕಳನ್ನು ಯಾವಾಗ ಪಡೆಯಬೇಕು ಎಂದು ನಿರ್ಧರಿಸುತ್ತಾರೆ. ಆದರೆ ಹೆಚ್ಚಿನವರು ತಂದೆಯಾಗುವ ಅನುಭವವನ್ನು ಬೇಗ ಪಡೆಯಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಅಲ್ಲದೆ, ಶಿಶುಪಾಲನೆ ಮತ್ತು ಉದ್ಯೋಗ ಜೀವನದ ನಡುವೆ ಹೊಂದಾಣಿಕೆ ಇರಲಿ ಎನ್ನುವ ಕಾರಣಕ್ಕೆ ಇತ್ತೀಚೆಗೆ ಸರ್ಕಾರದಿಂದ ಪಾವತಿಸುವ ಪಿತೃತ್ವ ರಜೆಯನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಎರಡು ವಾರಗಳಿಂದ ನಾಲ್ಕು ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.