ಹಾಸನ :– ಪಕ್ಷ ಕಟ್ಟುವ ಕುರಿತು ಹಾಸನಾಂಬೆ ಎದುರು ಪ್ರತಿಜ್ಞೆ ಮಾಡಿದ್ದೇವೆ ಎಂದು GT ದೇವೇಗೌಡ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹಾಸನಾಂಬೆ ಎದುರು ಪಕ್ಷ ಬಿಡಲ್ಲ ಎಂದು ಜೆಡಿಎಸ್ ಶಾಸಕರು ಆಣೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಹಾಸನಾಂಬೆ ಎದುರು ನಾವ್ಯಾರು ಆಣೆ ಮಾಡಿಲ್ಲ, ಪಕ್ಷ ಕಟ್ಟುವ ಕುರಿತು ಪ್ರತಿಜ್ಞೆ ಮಾಡಿದ್ದೇವೆ ಎಂದರು.
ಜೆಡಿಎಸ್ ನಾಯಕರು ಯಾರು ಪಕ್ಷ ಬಿಡುವುದಿಲ್ಲ. ಲಕ್ಷಾಂತರ ಜನರು ಬರುವ ತಾಯಿ ಎದುರು ಆಣೆ – ಪ್ರಮಾಣ ಸಾಧ್ಯವಾ?
ನಾವೆಲ್ಲರೂ ಕೂಡ ನಮ್ಮ ಮನಸಿನಲ್ಲಿರುವುದನ್ನು ಕೇಳಿಕೊಂಡಿದ್ದೇವೆ. ರಾಜ್ಯದಲ್ಲಿ ಪಕ್ಷ ಬಲವರ್ಧನೆ, ಕುಮಾರಸ್ವಾಮಿಯನ್ನು ಸಿಎಂ ಮಾಡುವುದು ನಮ್ಮ ಗುರಿ. ಆ ಕುರಿತು ನಾವು ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆ ವಿಚಾರವಾಗಿ ಮಾತನಾಡಿ, ಬಿ ವೈ ವಿಜಯೇಂದ್ರ ಪ್ರಬಲ ಸಮುದಾಯದ ನಾಯಕ. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯಡಿಯೂರಪ್ಪ ಸಿಎಂ ಆಗಬೇಕು ಅಂತ 50 ಸಾವಿರ ಜನ ಸೇರಿಸಿದವನು ನಾನು, ಅವರು ಮುಖ್ಯಮಂತ್ರಿ ಆದ ಮೇಲೆ ವೀರಶೈವರು ಮಾತ್ರವಲ್ಲ, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಒಟ್ಟಾಗಿ ಕರೆದುಕೊಂಡು ಹೋದರು. ಯಡಿಯೂರಪ್ಪ, ಕುಮಾರಸ್ವಾಮಿ ಒಟ್ಟಾಗಿ ಹೋದ ಕಾರಣಕ್ಕಾಗಿಯೇ ಅಧಿಕಾರ ಸಿಕ್ಕಿದ್ದು ಮಾತ್ರವಲ್ಲದೇ ಇಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು.
ಈಗ ಅದೇ ರೀತಿ ಯಡಿಯೂರಪ್ಪನವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮತ್ತೊಂದು ಕಡೆ ಕುಮಾರಸ್ವಾಮಿ ಜೆ ಡಿ ಎಸ್ ರಾಜ್ಯಾಧ್ಯಕ್ಷ ಆಗಿದ್ದಾರೆ, ಇಬ್ಬರು ಒಟ್ಟಾಗಿ ಹೋದರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತದೆ. ವಿಜಯೇಂದ್ರ ಯುವ ನಾಯಕ, ಅವರಿಗೆ ಎಲ್ಲಾ ಸಮುದಾಯದ ಬೆಂಬಲ ಇದೆ, ಯಡಿಯೂರಪ್ಪ ಸಿಎಂ ಆಗಲು ವಿಜಯೇಂದ್ರ ಚಾಣಾಕ್ಷತವು ಇದೆ ಎಂದರು.