ಓಸ್ಲೋ : 182 ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ KLM ರಾಯಲ್ ಡಚ್ ಏರ್ ಲೈನ್ಸ್ ವಿಮಾನವು ನಾರ್ವೆಯ ಓಸ್ಲೋ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಹೈಡ್ರಾಲಿಕ್ ವೈಫಲ್ಯ ಕಂಡು ಬಂದಿದೆ. ತಕ್ಷಣವೇ ವಿಮಾನದ ಸಿಬ್ಬಂದಿ ನಾರ್ವೆಯ ಸ್ಯಾಂಡೆಫ್ ಜೋರ್ಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ವೇಳೆ ವಿಮಾನವು ರನ್ ವೇಯಿಂದ ಜಾರಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಮ್ ಸ್ಟರ್ ಡ್ಯಾಮ್ ಗೆ ತೆರಳುತ್ತಿದ್ದ ಬೋಯಿಂಗ್ 737-800 ವಿಮಾನ ಓಸ್ಲೋದಿಂದ ದಕ್ಷಿಣಕ್ಕೆ 110 ಕಿಲೋಮೀಟರ್ ದೂರದಲ್ಲಿರುವ ಸ್ಯಾಂಡೆಫ್ ಜೋರ್ಡ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದೆ. ಆದರೆ ಲ್ಯಾಂಡಿಂಗ್ ರೋಲ್ ಔಟ್ ಸಮಯದಲ್ಲಿ ವಿಮಾನವು ನಿಯಂತ್ರಣವನ್ನು ಕಳೆದುಕೊಂಡು ರನ್ ವೇಯಿಂದ ಜಾರಿದೆ.
ವಿಮಾನವು ರನ್ ವೇಯಿಂದ ಜಾರಿ ಟ್ಯಾಕ್ಸಿವೇ ಬಳಿ ಮೃದುವಾದ ಹುಲ್ಲಿನ ಮೇಲೆ ನಿಂತಿದೆ. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸೇರಿದಂತೆ 182 ಜನರಿದ್ದು ಯಾರಿಗೂ ಯಾವುದೇ ರೀತಿಯ ಅಪಾಯಗಳಾಗಿಲ್ಲ. ಎಲ್ಲರು ಸುರಕ್ಷಿತವಾಗಿದ್ದಾರೆ. ಸಿಬ್ಬಂದಿಗಳು ತುರ್ತು ಕಾರ್ಯಾಚರಣೆಯನ್ನು ನಡೆಸಿ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.