ಹೊನೊಲುಲು: ಅಮೆರಿಕದ ಹವಾಯಿಯಲ್ಲಿ ಲಘು ವಿಮಾನವೊಂದು ನಿಯಂತ್ರಣ ಕಳೆದುಕೊಂಡು ವಿಮಾನ ನಿಲ್ದಾಣದ ಸಮೀಪದ ಕಟ್ಟಡಕ್ಕೆ ಢಿಕ್ಕಿಯಾಗಿ ಪತನವಾಗಿದೆ. ಅಮೆರಿಕದ ಹವಾಯಿಯಲ್ಲಿರುವ ಹೊನೊಲುಲು ವಿಮಾನ ನಿಲ್ದಾಣದ ಬಳಿ ಈ ಘಟನೆ ನೇಡೆದಿದೆ.
ಮೂಲಗಳ ಪ್ರಕಾರ ತರಬೇತಿ ಹಾರಾಟದಲ್ಲಿದ್ದ ವಿಮಾನವು ವೇಗವಾಗಿ ತನ್ನ ಎತ್ತರ ಕಳೆದುಕೊಂಡು ಎಡಕ್ಕೆ ತಿರುಗಿ ಖಾಲಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಮತ್ತು ತರಬೇತಿ ಪೈಲಟ್ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರೆಸ್ಟನ್ ಕಲುಹಿವಾ (ಪ್ರಯಾಣಿಕ) 22 ವರ್ಷದ ತರಬೇತಿ ಪೈಲಟ್ ಹಿರಾಮ್ ಡಿಫ್ರೈಸ್ ಎಂದು ಗುರುತಿಸಲಾಗಿದೆ.
ಕಮಲಾ ಏರ್ ನಿರ್ವಹಿಸುತ್ತಿದ್ದ ವಿಮಾನವು ಅಪಘಾತದ ನಂತರ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ. ಕೂಡಲೇ ಹೊನೊಲುಲು ಅಗ್ನಿಶಾಮಕ ಇಲಾಖೆ, ಪೊಲೀಸರು ಮತ್ತು ನಗರದ ತುರ್ತು ನಿರ್ವಹಣಾ ಇಲಾಖೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು, ಕಟ್ಟಡದಲ್ಲಿ ಯಾರೂ ಇಲ್ಲದ ವೇಳೆ ವಿಮಾನ ಢಿಕ್ಕಿಯಾಗಿದ್ದು ಹೆಚ್ಚಿನ ಸಾವು ನೋವು ಸಂಭವಿಸಿಲ್ಲ. ಫೆಡರಲ್ ವಿಮಾನಯಾನ ಆಡಳಿತ (ಎಫ್ಎಎ) ಅಪಘಾತದ ಬಗ್ಗೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೂ ಮೊದಲು ಪೈಲಟ್ “ಕಾಮಕಾ 689, ನಾವು, ನಾವು, ನಾವು ಇಲ್ಲಿ ನಿಯಂತ್ರಣ ತಪ್ಪಿದ್ದೇವೆ”.. ಎಂದು ನಿಯಂತ್ರಣ ಕೇಂದ್ರಕ್ಕೆ ಸಂದೇಶ ರವಾನಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.