ಕೆರಿಬಿಯನ್ ರಾಷ್ಟ್ರ ಗಯಾನಾಕ್ಕೆ ಭಾರತವು ತನ್ನ ಔಷಧೀಯ ಉತ್ಪನ್ನಗಳ ರಫ್ತನ್ನು ಇನ್ನಷ್ಟು ಹೆಚ್ಚಿಸಲಿದೆ ಜೊತೆಗೆ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡು ದಿನದ ಪ್ರವಾಸದ ಅಂಗವಾಗಿ ಗಯಾನಾದ ಜಾರ್ಜ್ಟೌನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಯಾನಾದ ಅಧ್ಯಕ್ಷ ಮುಹಮ್ಮದ್ ಇರ್ಫಾನ್ ಆಲಿ ಭರಮಾಡಿಕೊಂಡರು.
ಗಯಾನಾದ ಅಧ್ಯಕ್ಷ ಇರ್ಫಾನ್ ಆಲಿ ಜತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಉಭಯ ದೇಶಗಳ ನಡುವೆ ರಕ್ಷಣೆ, ಆಹಾರ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರವನ್ನು ಉಲ್ಲೇಖಿಸಿದರು. ಜಾಗತಿಕ ಸಂಸ್ಥೆಗಳ ಸುಧಾರಣೆಯ ಅಗತ್ಯವಿರುವುದಾಗಿ ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಮೋದಿ ತಿಳಿಸಿದರು.
ನಮ್ಮ ಸಂಬಂಧಗಳನ್ನು ಬಲಿಷ್ಠಗೊಳಿಸುವ ಹಲವು ಹೊಸ ಉಪಕ್ರಮಗಳನ್ನು ನಾವು ಗುರುತಿಸಿದ್ದೇವೆ. ಗಯಾನಾದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ಮಹತ್ವದ ಕೊಡುಗೆ ನೀಡಿದೆ. ಕಳೆದ ವರ್ಷ ರಾಗಿ ನೀಡುವ ಮೂಲಕ ಆಹಾರ ಭದ್ರತೆಗೆ ಕೊಡುಗೆ ನೀಡಿದ್ದೇವೆ. ಇತರ ಬೆಳೆಗಳ ಕೃಷಿಯಲ್ಲೂ ನಾವು ನೆರವಾಗಿದ್ದೇವೆ. ಇವತ್ತು ಸಹಿ ಹಾಕಲಾಗಿರುವ ಕೃಷಿ ಒಪ್ಪಂದ ಪತ್ರವು ನಮ್ಮ ಪ್ರಯತ್ನಗಳನ್ನು ಬಲಪಡಿಸಲಿದೆ ಎಂದರು.
ಭಾರತದ ಇಂಧನ ಭದ್ರತೆಯಲ್ಲಿ ಗಯಾನಾ ಪ್ರಮುಖ ಪಾತ್ರ ವಹಿಸುತ್ತದೆ. ದೀರ್ಘಾವಧಿಯ ಪಾಲುದಾರಿಕೆಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು. ನಾವು ಜಗತ್ತಿನಲ್ಲಿ ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಸಾಗುತ್ತಿದ್ದೇವೆ. ರಕ್ಷಣೆಯ ಕ್ಷೇತ್ರದಲ್ಲಿ ನಿಕಟ ಸಹಕಾರವು ನಮ್ಮ ನಡುವಿನ ಪರಸ್ಪರ ವಿಶ್ವಾಸದ ಸಂಕೇತವಾಗಿದೆ. ಭಾರತ ಕಳೆದ ವರ್ಷ ಗಯಾನಾಕ್ಕೆ ಎರಡು ಡಾರ್ನಿಯರ್ ವಿಮಾನಗಳನ್ನು ಪೂರೈಸಿದೆ. ಸ್ಕಾಲರ್ ಶಿಪ್ ಮತ್ತು ತರಬೇತಿಯ ಮೂಲಕ ಗಯಾನಾದ ಯೋಧರ ಸಾಮರ್ಥ್ಯ ವೃದ್ಧಿಯಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಲಿದ್ದೇವೆ. ಗಯಾನಾ ಅಧ್ಯಕ್ಷ ಇರ್ಫಾನ್ ಆಲಿ ಅವರು ಭಾರತೀಯ ಸಮುದಾಯದ ದೊಡ್ಡ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.