ಧಾರವಾಡ : ಅಸಾಧ್ಯ ಎಂಬುದನ್ನು ಸಾಧ್ಯ ಮಾಡಿ ನಿರೂಪಿಸುವುದೇ ಮಠಗಳಲ್ಲಿನ ಜ್ಞಾನಾರ್ಜನೆಯಾಗಿದೆ. ಇಲ್ಲಿ ದೊರೆಯುವ ಸಂಸ್ಕಾರದ ವಿದ್ಯೆಯ ಋಣ ಅರಿವಿನ ಜ್ಞಾನಮೆಟ್ಟಿಲು ಎಂಬುದನ್ನು ಹಲವು ಶಿಷ್ಯರು ನಿರೂಪಿಸಿದ್ದೇ ಸಾಕ್ಷಿ ಎಂದು ಘೋಡಗೇರಿ ಶಿವಾನಂದ ಮಠದ ಪೂಜ್ಯ ಮಲ್ಲಯ್ಯಪ್ಪ ಮಹಾಸ್ವಾಮಿಗಳು ಹೇಳಿದರು.
ಪಟ್ಣಣದ ಶಿವಾನಂದಮಠದ ಆವರಣದಲ್ಲಿ ಲಿಂ.ಬಸವೇಶ್ವರ ಶ್ರೀಗಳ 40ನೇ,ಶ್ರೀ ಬಸವರಾಜ ಮಹಾಸ್ವಾಮಿಗಳ 18ನೇ ಹಾಗೂ ಶಾಂತಯೋಗಿ ಶ್ರೀ ಬಸವೇಶ್ವರ ಸ್ವಾಮೀಗಳ 6ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ಸಾಕೆಂಬುದನ್ನು ಕೊಟ್ಟು ಬಿಡುವುದೇ ಮೋಕ್ಷ ಪ್ರಾಪ್ತಿಗೆ ನಾವು ಕೊಡುವ ಋಣ ಸಂದಾಯವಾಗಿದೆ. ಮಠಗಳು ಇರದೇ ಇದ್ದರೇ ನಾವಿಂದು ಉದ್ದಾರವಾಗುತ್ತಿರಲಿಲ್ಲ. ನಾನು ಯಾವತ್ತೂ ಯಾರಿಗೂ ಸ್ವಾಮಿಯಾಗಿಲ್ಲ. ಉತಾರ ಇಲ್ಲದ ಮಠಕ್ಕೆ ಜವಾಬ್ದಾರಿ ಹೊತ್ತ ನನಗೆ ಬೇಕೆಂಬುದೇ ಇಲ್ಲ. ಸಾಕೆಂಬುದನ್ನೇ ನನ್ನ ಜೀವನದ ಪಾಠವಾಗಿರಿಸಿಕೊಂಡಿದ್ದೇನೆ. ಶ್ರೀ ಶಿವಾನಂದಮಠದ ಹೊಣೆಯನ್ನು ವರ್ಷದ ಹಿಂದೆಯೇ ಹಿಂತಿರುಗಿಸಿದ್ದೇನೆ. ಇದರರ್ಥ ನಾನು, ನನ್ನದು ಎಂಬುದರ ಹಿಂದೆ ನಾನಿಲ್ಲ ಎಂಬುದಾಗಿದೆ. ಸಂಸ್ಥೆ ಬೆಳೆಯಲಿ, ಕಿರಿಯರಿಗೆ ಹಿರಿಯರ ಮಾರ್ಗದರ್ಶನ ಸಿಗಬೇಕು. ಅಧಿಕಾರ ವಿಕೇಂದ್ರೀಕರಣವಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಂಶಿ-ರಬಕವಿ ಬ್ರಹ್ಮಾನಂದಮಠದ ಪೂಜ್ಯ ಗುರುಶಿದ್ದೇಶ್ವರ ಸ್ವಾಮೀಜಿಯವರು ಮಾತನಾಡಿ, ಶೃದ್ದಾಭಕ್ತಿಯ ತಾಣವಾಗಿರುವ ಶಿವಾನಂದಮಠವು, ಶಿಷ್ಯಪರಂಪರೆಯ ಉನ್ನತಿಯನ್ನು ನೆನಪಿಸಿದೆ. ಶ್ರೀಗಳ ಕಾಳಜಿಯ ಶಕ್ತಿ ಮಕ್ಕಳಲ್ಲಿತ್ತು ಎಂಬುದನ್ನು ಶ್ರೀ ಶಿವಕುಮಾರ ಸ್ವಾಮೀಜಿಯವರು ವೈದ್ಯರ ಬಳಿ ನಿರೂಪಿಸಿದ್ದಾರೆ. ಲಿಂ.ಬಸವೇಶ್ವರ ಶ್ರೀಗಳೂ ಸಹ ಶೈಕ್ಷಣಿಕ ಪ್ರಗತಿಗೆ ಜೋಳಗಿ, ಬೆತ್ತ ಹಿಡಿದು ಬಿಕ್ಷೆ ಬೇಡಿ ಇಂಥಹ ದೊಡ್ಡ ಸಂಸ್ಥೆ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದಾರೆ. ಗುರುವಿನ ಋಣ ಅಗಾಧವಾದದ್ದು,ಯಾವುದೇ ರೂಪದಲ್ಲಾದರೂ ಇದು ಸಲ್ಲಿಕೆಯಾಗಬೇಕು ಅಂದಾಗ ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದರು.
ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಚಿಂತನೆಗಳು ಅರಿಯದೇ ತಿಳಿದುಕೊಳ್ಳುವುದಲ್ಲ. ತಂತ್ರ ಜ್ಞಾನಯುಗದಲ್ಲಿ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ. ಮೊಬೈಲ್ ಗೀಳು ಸರಿಯಲ್ಲ. ಆಚಾರ,ವಿಚಾರ,ಸಂಸ್ಕ್ರತಿ, ಒಳ್ಳೆಯ ಸತ ಸಂಪ್ರದಾಯಗಳು ಮಠದ ಹೊರತಾಗಿ ಮತ್ತೆಲ್ಲೂ ಸಿಗದು ಎಂದು ಹೇಳಿದರು.
ಕಲ್ಯಾಣಪುರದ ಅಭಿನವ ಬಸವಣ್ಣಜ್ಜನವರು, ಶಿವಾನಂದಮಠದ ಶ್ರೀಗಳು,ಜತ್ತದಮಹಾಂತದೇವರು, ಮಾತನಾಡಿ,ಲಿಂಗೈಕ್ಯ ಪೂಜ್ಯರ ಅನೇಕ ಆದರ್ಶಗಳನ್ನು ಮನದೊಳಗೆ ಅಳವಡಿಸಿಕೊಳ್ಳಬೇಕು.ಪೂಜ್ಯರ ತತ್ವ ಆದರ್ಶಗಳು,ಅವರ ವಿಚಾರಧಾರೆಗಳು ನಮಗೆ ದಾರಿ ದೀಪಗಳು ಎಂದು ಸ್ಮರಿಸಿದರು.
ಶಾಸಕ ಎಂ.ಆರ್.ಪಾಟೀಲ್ ಮಾತನಾಡಿ, ವಿದ್ಯಾದಾನಕ್ಕಿಂತ ಮತ್ತೊಂದು ಶ್ರೇಷ್ಠದಾನವಿಲ್ಲ. ತ್ರಿವಿಧ ದಾಸೋಹ ಕಲ್ಪಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಸಂಸ್ಥೆಯನ್ನು ಅತ್ಯಂತ ಉನ್ನತ ಮಟ್ಟದಲ್ಲಿ ಬೆಳೆಸಲು ಮಠದ ಶ್ರೀಗಳ ಶ್ರಮ ಸಾಕಷ್ಟಿದೆ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಶೈಕ್ಷಣಿಕ ಉನ್ನತಿಗೆ ಇನ್ನಷ್ಟು ಅನುದಾನ ನೀಡಲು ಶ್ರಮವಹಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಎಸ್.ಐ.ಚಿಕ್ಕನಗೌಡ್ರ, ಮುಖಂಡರಾದ ಅರವಿಂದ ಕಟಗಿ ,ಸೋಮರಾವ ದೇಸಾಯಿ,ಶ್ರೀಶೈಲ ಮಸೂತಿ, ಮಲ್ಲಪ್ಪ ಮಾರಡಗಿ,ವಿ.ಸಿ.ಅಂಗಡಿ,ರಮೇಶ ಕೊಪ್ಪದ,ಸಂಸ್ಥೆಯ ಕಾರ್ಯದರ್ಶಿ ಯಲ್ಲಪ್ಪ ಮೇಗುಂಡಿ, ಸಹಿತ ಇನ್ನಿತರರು ವೇದಿಕೆ ಮೇಲಿದ್ದರು.