ಅಳಿವಿನ ಅಂಚಿನಲ್ಲಿರುವ ಸಮುದ್ರ ಆಮೆಯ ಆಹಾರ ತಿಂದು ಮೂವರು ಸಾವನ್ನಪ್ಪಿದ್ದು, ಇತರ 32 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಫಿಲಿಪ್ಪೀನ್ಸ್ ನಲ್ಲಿ ಸಂಭವಿಸಿದೆ.
ಮಾಗುಯಿಂಡಾನೊ ಡೆಲ್ನೊರ್ಟೆ ಪ್ರಾಂತದ ಕರಾವಳಿ ನಗರದಲ್ಲಿ ಕಳೆದ ವಾರ ಸಮುದ್ರ ಆಮೆಯ ಖಾದ್ಯ ತಿಂದ ಟೆಡುರೆ ಬುಡಕಟ್ಟಿನ ಹಲವಾರು ಮಂದಿ ಅತಿಸಾರ, ವಾಂತಿ ಮತ್ತು ಕಿಬ್ಬೊಟ್ಟೆಯ ಸೆಳೆತದಂತಹ ರೋಗ ಲಕ್ಷಣಗಳನ್ನು ಅನುಭವಿಸಲು ಆರಂಭಿಸಿದರು. ತಕ್ಷ ಅವರನ್ನುಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ.
ಫಿಲಿಪ್ಪೀನ್ಸ್ ನ ಪರಿಸರ ರಕ್ಷಣಾ ಕಾಯ್ದೆಯಡಿ ಸಮುದ್ರ ಆಮೆಗಳನ್ನು ಬೇಟೆಯಾಡುವುದು ಅಥವಾ ತಿನ್ನುವುದನ್ನು ನಿಷೇಧಿಸಲಾಗಿದ್ದರೂ ಕೆಲವು ಬುಡಕಟ್ಟು ಸಮುದಾಯದವರು ಅದನ್ನು ಸಾಂಪ್ರದಾಯಿಕ ಖಾದ್ಯ ಪದಾರ್ಥವೆಂದು ಪರಿಗಣಿಸಿದ್ದಾರೆ.
ಇದೇ ಖಾದ್ಯವನ್ನು ತಿಂದ ಕೆಲವು ನಾಯಿಗಳು, ಬೆಕ್ಕುಗಳು ಹಾಗೂ ಕೋಳಿಗಳೂ ಮೃತಪಟ್ಟಿವೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಆಮೆಗಳು ವಿಷಕಾರಿ ವಸ್ತುಗಳನ್ನು ತಿಂದಿರಬಹುದು. ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.