ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿರುವ ಘಟನೆ ನೈಜೀರಿಯಾದ ಆಗ್ನೇಯ ರಾಜ್ಯ ಎನುಗುದಲ್ಲಿ ಸಂಭವಿಸಿದೆ. ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ 17 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ.
ನೈಜೀರಿಯಾದ ಫೆಡರಲ್ ರಸ್ತೆ ಸುರಕ್ಷತಾ ದಳದ ವಕ್ತಾರ ಒಲುಸೆಗುನ್ ಒಗುಂಗ್ಬೆಮೈಡ್ ಅವರ ಪ್ರಕಾರ, ಮೃತಪಟ್ಟವರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದಾರೆ ಎನ್ನಲಾಗುತ್ತಿದೆ. ಅಪಘಾತದಲ್ಲಿ 10 ಜನರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಕರ್ತರು ಇತರ ಮೂವರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನೈಜೀರಿಯಾದ ರಸ್ತೆಗಳಲ್ಲಿ ಸರಕುಗಳನ್ನು ಸಾಗಿಸಲು ದಕ್ಷ ರೈಲ್ವೆ ವ್ಯವಸ್ಥೆಯ ಕೊರತೆಯಿಂದಾಗಿ ಟ್ರಕ್ ಅಪಘಾತಗಳ ಅಪಾಯ ಹೆಚ್ಚುತ್ತಿರುವ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಇದು ಈ ತಿಂಗಳಲ್ಲಿ ನೈಜೀರಿಯಾದಲ್ಲಿ ಸಂಭವಿಸಿದ ಎರಡನೇ ಪ್ರಮುಖ ಪೆಟ್ರೋಲ್ ಟ್ಯಾಂಕರ್ ಸ್ಫೋಟವಾಗಿದೆ. ಇದಕ್ಕೂ ಮೊದಲು, ನೈಜರ್ ರಾಜ್ಯದ ಸುಲೇಜಾ ಪ್ರದೇಶದಲ್ಲಿ ಮತ್ತೊಂದು ಪೆಟ್ರೋಲ್ ಟ್ಯಾಂಕರ್ ಸ್ಫೋಟ ಸಂಭವಿಸಿ 98 ಜನರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ.