ಬೆಂಗಳೂರು: “ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
HDK ಸುತ್ತ ಅಕ್ರಮ ಗಣಿಗಾರಿಕೆ ಕುಣಿಕೆ ಸುತ್ತಿಕೊಳ್ಳುವ ಸಾಧ್ಯತೆ: ಬಿಜೆಪಿ ಬೆಂಬಲವಿದ್ಯಾ?
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.“ಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು” ಎಂದು ತಿಳಿಸಿದರು.
“ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.
“ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಎಷ್ಟು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು ಎಂಬುದನ್ನು ಮಾಧ್ಯಮಗಳ ಬಳಿ ಇರುವ ವಿಡಿಯೋಗಳಲ್ಲಿ ನೋಡಿ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಪಾದಯಾತ್ರೆಗೆ ಕರೆಸಲಾಗಿದೆ. ಅವರಲ್ಲಿ ಹೊಂದಾಣಿಕೆ ಎಲ್ಲಿದೆ? ಒಗ್ಗಟ್ಟು ಎಲ್ಲಿದೆ? ಅವರ ನಡುವೆ ಸಮನ್ವಯತೆ ಇಲ್ಲ ಎಂದು ಅವರೇ ಹೇಳಿದ್ದಾರೆ. ಅವರು ಒಂದಾಗಿರಲಿ ಅಥವಾ ಬೇರೆಯಾಗಿರಲಿ ನಮಗೆ ಯಾವುದೇ ಅಭ್ಯಂತರವಿಲ್ಲ” ಎಂದು ತಿಳಿಸಿದರು.