ವಾಷಿಂಗ್ಟನ್: ಕಳೆದ ಕೆಲ ದಿನಗಳಿಂದ ದಟ್ಟವಾದ ಹಿಮಪಾತ, ಮಂಜುಗಡ್ಡೆ, ಶೀತಗಾಳಿ ಹಾಗೂ ತಾಪಮಾನ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಅಮೆರಿಕದ ಬಹುತೇಕ ಕಡೆಗಳಲ್ಲಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಶೀತಗಾಳಿಯಿಂದಾಗಿ ದಶಕದಲ್ಲೇ ಅತಿಹೆಚ್ಚು ಹಿಮಪಾತವಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ 2 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಕಾನ್ಸಸ್, ಪಶ್ಚಿಮ ನೆಬ್ರಸ್ಕಾ ಮತ್ತು ಇಂಡಿಯಾನಾ ಪ್ರದೇಶದ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ದಟ್ಟವಾದ ಮಂಜು ಹಾಗೂ ಮಂಜುಗಡ್ಡೆಯ ಹೊದಿಕೆ ಕಂಡುಬರುತ್ತಿದೆ. ಸಂಚಾರದಲ್ಲಿ ಸಿಲುಕಿಕೊಳ್ಳುವ ವಾಹನ ಸವಾರರ ರಕ್ಷಣೆಗಾಗಿ ರಾಷ್ಟ್ರೀಯ ಪಡೆ ಕಾರ್ಯನಿರ್ವಹಿಸುತ್ತಿದೆ. ಕಾನ್ಸಸ್ ಮತ್ತು ಮಿಸ್ಸೋರಿ ಭಾಗದಲ್ಲಿ ಕನಿಷ್ಠ 8 ಇಂಚು ಮಂಜುಗಡ್ಡೆಯ ಪದರ ನಿರ್ಮಾಣವಾಗುವ ಸಾಧ್ಯತೆಯನ್ನು ರಾಷ್ಟ್ರೀಯ ಹವಾಮಾನ ಸೇವೆಗಳ ವಿಭಾಗ ಅಂದಾಜಿಸಿದೆ. ಈ ಮೈಕೊರೆಯುವ ಚಳಿಯ ತೀವ್ರತೆ ಹೆಚ್ಚಲಿದ್ದು, 72 ಕಿ.ಮೀ ವೇಗದ ಶೀತಗಾಳಿ ಬೀಸುವ ನಿರೀಕ್ಷೆ ಇದೆ. ನ್ಯೂಜೆರ್ಸಿಯಲ್ಲಿ ಮಂಗಳವಾರವರೆಗೂ ಈ ಪರಿಸ್ಥಿತಿ ಮುಂದುವರಿಯಲಿದೆ.
“ಈ ಭಾಗದ ಹಲವು ಪ್ರದೇಶಗಳು ಭಾರಿ ಹಿಮಪಾತವನ್ನು ಎದುರಿಸುತ್ತಿದ್ದು, ಬಹುಶಃ ಇದು ಕನಿಷ್ಠ ಒಂದು ದಶಕದಲ್ಲೇ ಅತ್ಯಧಿಕ” ಎಂದು ಹವಾಮಾನ ಸೇವೆಗಳ ವಿಭಾಗ ಹೇಳಿದೆ. ಸುಮಾರು 6.3 ಕೋಟಿ ಅಮೆರಿಕನ್ನರು ಭೀಕರ ಚಳಿಗೆ ತುತ್ತಾಗಿದ್ದಾರೆ ಎಂದು ರಾಷ್ಟ್ರೀಯ ಹವಾಮಾನ ಸೇವೆಗಳ ಅಧಿಕಾರಿ ಬಾಬ್ ಒರವೆಕ್ ಹೇಳಿದ್ದಾರೆ.