ಮಂಡ್ಯ : ಸಕ್ಕರೆನಾಡಿನ ಅಕ್ಕರೆಯ ಮಂಡ್ಯದ ಜನತೆ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಪರ ನಿಂತಿದ್ದಾರೆ. ಕನ್ನಡ ಚಲನಚಿತ್ರೋತ್ಸವಕ್ಕೆ ಬಾರದ ಸ್ಟಾರ್ ನಟ-ನಟಿಯರ ವಿರುದ್ಧ ಮೊಟ್ಟ ಮೊದಲು ಧ್ವನಿ ಎತ್ತಿರುವ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಪರ ಮಂಡ್ಯದ ಜನತೆ ಕೈಜೋಡಿಸಿದ್ದಾರೆ. ಶಾಸಕ ಗಣಿಗ ರವಿಕುಮಾರ್ ಬಗ್ಗೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಜನತೆ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ನಾಚಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಮಂಡ್ಯದಲ್ಲಿಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯದ ಎಸ್ಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಹಲವು ಸಂಘಟನೆಗಳು, ನಾಚಪ್ಪ ಹಾಗೂ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ರವಿಕುಮಾರ್ ಗಣಿಗ ಹೇಳಿಕೆಯನ್ನ ತಿರುಚಿ ತೇಜೋವಧೆ ಮಾಡಲಾಗಿದೆ. ಮಂಡ್ಯ ಶಾಸಕರ ಜನಪರ ಕೆಲಸಗಳನ್ನು ಸಹಿಸಲಾಗದೆ ಈ ರೀತಿಯ ಕೆಲಸ ಮಾಡ್ತಿದ್ದಾರೆ. ಸರ್ಕಾರದ ವಿರುದ್ಧವೇ ಶಾಸಕರು ಧ್ವನಿ ಎತ್ತಿ ಮಾತನಾಡಿದ್ದಾರೆ. ಕನ್ನಡ ನಾಡಲ್ಲಿ ಬೆಳೆದು ಹೆಸರು ಗಳಿಸಿದ ಕೆಲವು ನಟ, ನಟಿಯರಿಗೆ ಕನ್ನಡ ಹಾಗೂ ನಾಡು-ನುಡಿಯ ಮೇಲೆ ಯಾವ ಗೌರವ ಬೆಲೆಯೂ ಇಲ್ಲ. ನಾಚಪ್ಪ ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿಭಂಗ ಮಾಡುತ್ತಿದ್ದಾರೆ. ನಾಚಪ್ಪ, ಚಂದ್ರಚೂಂಡ್ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಮಂಡ್ಯ ಎಸ್ಪಿ, ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆ.ಸಿ.ಯೋಗೇಶ್,ಉಮೇಶ್, ಜಯರಾಮ್, ಬೂದನೂರು ಸತೀಶ್ ಸೇರಿ ಮತ್ತಿತರರು ಭಾಗಿಯಾಗಿದ್ದರು.
ಕನ್ನಡ ಕಿರಿಕ್ ಪಾರ್ಟಿ ಸಿನಿಮಾದಿಂದ ಬೆಳೆದು ಕನ್ನಡ ಚಿತ್ರರಂಗವನ್ನೇ ಕಡೆಗಣಿಸಿರುವ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ರವಿ ಗಣಿಗ ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡ ಹಾಗೂ ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಗಳಿಗೆ ರಶ್ಮಿಕಾ ಆಹ್ವಾನ ನೀಡಿದ್ದರೂ ಬರುತ್ತಿಲ್ಲವೆಂದು ಶಾಸಕ ರವಿಕುಮಾರ್ ಗಣಿಗ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ, ರಶ್ಮಿಕಾಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೂ ಪತ್ರ ಬರೆದಿದ್ದರು. ನಾಚಪ್ಪ ಈ ನಡೆಗೆ ನೇರ ನುಡಿಯ ಶಾಸಕರು ಕೂಡ ತಕ್ಕ ಉತ್ತರ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.