ಮೈಸೂರು:- ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಡಿ ಪಂಕ್ಚರ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಗಾಡಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪಂಕ್ಚರ್ ಆಗಿದೆ ಎಂದರು.
ಅಧಿಕಾರಕ್ಕೆ ಬಂದ 6 ತಿಂಗಳಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಆರೋಪಿಸಿದರು. ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತಮ್ಮ ಸರ್ಕಾರದ ಆಡಳಿತ ವೈಖರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೆನಿಸಿದೆ. ಹೀಗಾಗಿಯೇ ಅವರು ಜಾತಿವಾರು ಉಪಮುಖ್ಯಮಂತ್ರಿಗಳನ್ನು ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಅಧಿಕಾರಕ್ಕೆ ಬಂದ 7 ತಿಂಗಳಿಗೆ ದೇಶದಲ್ಲಿ ಯಾವುದಾದರೂ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಅವರು ಕುಟುಕಿದರು.
ದೇಶದ ಜನತೆಗೆ ಮತ್ತೆ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಉತ್ತುಂಗಕ್ಕೇರಿರುವ ಮೋದಿಯವರ ಜನಪ್ರಿಯತೆಯನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮತಗಳನ್ನಾಗಿ ಪರಿವರ್ತಿಸಬೇಕು. ವೀರ ಸೇನಾನಿಗಳಂತೆ ಹೋರಾಟ ನಡೆಸಿ ರಾಜ್ಯದ 28 ಸ್ಥಾನಗಳಲ್ಲೂ ಬಿಜೆಪಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.