ಬೆಂಗಳೂರು;- ವಿವಿಧ ಯೋಜನೆಯಡಿ ಪಿಂಚಣಿಗಳನ್ನು ಪಡೆಯುವ ಫಲಾನುಭವಿಗಳಿಗೆ ಮಹತ್ವದ ಸೂಚನೆಯೊಂದಿದೆ. ಫಲಾನುಭವಿಗಳ ಬ್ಯಾಂಕ್/ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್ಪಿಸಿಐ ಲಿಂಕ್ ಕಡ್ಡಾಯವಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ (ಡಿಬಿಟಿ) ಯೋಜನೆ ಮೂಲಕ ಪಾವತಿಸಲಾಗುತ್ತಿದೆ. ಇದಕ್ಕಾಗಿ ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್/ ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್ಪಿಸಿಐ ಲಿಂಕ್ ಮಾಡಬೇಕು ಎಂದು ಹೇಳಲಾಗಿದೆ.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಡಿಬಿಟಿ ಮೂಲಕ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಆದ್ದರಿಂದ ಬ್ಯಾಂಕ್/ ಅಂಚೆ ಖಾತೆಗೆ ಎನ್ಪಿಸಿಐ ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ಆಧಾರ್ ಗ್ರಾಮ ಆಡಳಿತಾಧಿಕಾರಿ (ವಿಎ) ಕಚೇರಿಯಲ್ಲಿರುತ್ತದೆ. ಫಲಾನುಭವಿಗಳು ವಿಎ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಲು ಮನವಿ ಮಾಡಲಾಗಿದೆ.
ಒಂದು ವೇಳೆ ನಿಮ್ಮ ಖಾತೆಯು ಎನ್ಪಿಸಿಐ ಲಿಂಕ್ ಆಗದಿದ್ದಲ್ಲಿ ಕೂಡಲೇ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್ ಪುಸ್ತಕದೊಂದಿಗೆ ಸಂಬಂಧಿಸಿದ ಬ್ಯಾಂಕ್/ ಅಂಚೆ ಇಲಾಖೆಗೆ ಭೇಟಿ ನೀಡಿ ಲಿಂಕ್ ಮಾಡಿಸಬೇಕಿದೆ.
ನವೆಂಬರ್ ಅಂತ್ಯದೊಳಗೆ ಎನ್ಪಿಸಿಐ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಎನ್ಪಿಸಿಐ ಲಿಂಕ್ ಮಾಡದಿದ್ದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.