ಬೆಂಗಳೂರು:– ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದ ಪೀಣ್ಯ ಫ್ಲೈ ಓವರ್ ಮೇಲೆ ಭಾರಿ ವಾಹನ ಸೇರಿ ಎಲ್ಲಾ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದು, ಪ್ರತಿ ಶುಕ್ರವಾರ ಮಾತ್ರ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.
ಮೇಲ್ಸೇತುವೆ ವಿಶೇಷ ದುರಸ್ತಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿರುವುದರಿಂದ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆವರೆಗೂ ಭಾರಿ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಉಳಿದ ದಿನ ಎಲ್ಲಾ ವಾಹನಗಳು ಪ್ಲೈ ಓವರ್ ಮೇಲೆ ಓಡಾಟ ಮಾಡಬಹುದು. ಆದರೆ, ಭಾರಿ ವಾಹನಗಳು ಮಾತ್ರ ಮೇಲ್ಸೇತುವೆ ಎಡಪಥದಲ್ಲಿ ಗರಿಷ್ಠ 40 ಕಿ.ಮೀ ವೇಗ ಮಿತಿಯಲ್ಲಿ ಸಂಚರಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ
ನಗರದ ತುಮಕೂರು ರಸ್ತೆಯಲ್ಲಿರುವ 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆಯಲ್ಲಿ 2021ರ ಡಿಸೆಂಬರ್ನಿಂದ ಬಸ್ಗಳು ಮತ್ತು ಟ್ರಕ್ಗಳಂತಹ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಫ್ಲೈಓವರ್ನಲ್ಲಿ ಪ್ರಿಸ್ಟ್ರೆಸ್ಡ್ ಕೇಬಲ್ಗಳು ತುಕ್ಕು ಹಿಡಿದ ಹಿನ್ನೆಲೆಯಲ್ಲಿ ರಿಪೇರಿ ಮಾಡುವ ಅಗತ್ಯವಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 38.5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಕೇಬಲ್ಗಳ ಅಳವಡಿಕೆ ಕಾರ್ಯ ನಡೆದಿದೆ
ಜನವರಿಯಲ್ಲಿ, 240 ಪ್ರಿಸ್ಟ್ರೆಸ್ಡ್ ಕೇಬಲ್ಗಳಲ್ಲಿ ಲೋಡ್ ಪರೀಕ್ಷೆಗಳನ್ನು ನಡೆಸಲು ಎನ್ಎಚ್ಎಐ 60 ಗಂಟೆಗಳ ಕಾಲ ಫ್ಲೈಓವರ್ ಮುಚ್ಚಿತ್ತು. ಸಮಿತಿಯ ಲೋಡ್ ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿದೆ ಎಂದು ತಜ್ಞರ ಸಮಿತಿಯ ಮುಖ್ಯಸ್ಥ, ಐಐಎಸ್ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಚಂದ್ರ ಕಿಶನ್ ಹೇಳಿದ್ದರು. ಮಾರ್ಚ್ನಲ್ಲಿ, ಎನ್ಎಚ್ಎಐ 1,243 ಪ್ರಿಸ್ಟ್ರೆಸ್ಡ್ ಕೇಬಲ್ಗಳನ್ನು ಬದಲಾಯಿಸಲು ಪ್ರಾರಂಭಿಸಿತ್ತು. ಸದ್ಯ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರಿಂದ ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯದಲ್ಲಿರುವ ಮೇಲ್ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಎನ್ಎಚ್ಎಐ ಗ್ರೀನ್ ಸಿಗ್ನಲ್ ನೀಡಿದೆ.