ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸುಮಾರು ೭ ತಿಂಗಳ ಕಾಲ ಜೈಲಿನಲ್ಲಿದ್ದ ನಟಿ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಸದ್ಯ ನೋವನ್ನೆಲ್ಲಾ ಮರೆತಿರೋ ಪವಿತ್ರಾ ಗೌಡ ಮತ್ತೆ ಹೊಸ ಜೀವನ ಶುರು ಮಾಡೋಕೆ ಮುಂದಾಗಿದ್ದಾರೆ. ಅವರು ‘ರೆಡ್ ಕಾರ್ಪೆಟ್ ಸ್ಟುಡಿಯೋ’ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಫೆಬ್ರವರಿ ೧೪ ಅಂದರೆ ಪ್ರೇಮಿಗಳ ದಿನದಂದು ರೀ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಪವಿತ್ರಾ ಗೌಡ ಅವರು ಈ ಮೊದಲೇ ‘ರೆಡ್ ಕಾರ್ಪೆಟ್’ ಸ್ಟುಡಿಯೋನ ಹೊಂದಿದ್ದರು. ಆದರೆ, ಕಾರಣಾಂತರಗಳಿಂದ ಇದು ಸರಿಯಾಗಿ ಕಾರ್ಯ ನಿರ್ವಹಿಸಿರಲಿಲ್ಲ. ಪವಿತ್ರಾ ಜೈಲಿನಲ್ಲಿ ಇದ್ದಾಗ ಇದನ್ನು ಸರಿಯಾಗಿ ನೋಡಿಕೊಳ್ಳುವವರು ಇರಲಿಲ್ಲ ಎನ್ನಲಾಗಿದೆ. ಈಗ ಫೆಬ್ರವರಿ 14ರಂದು ಇದನ್ನು ಅವರು ರೀಲಾಂಚ್ ಮಾಡುತ್ತಿದ್ದಾರೆ.
ಫೆಬ್ರವರಿ 14 ಎಂದರೆ ಪ್ರೇಮಿಗಳ ದಿನ. ಈ ವಿಶೇಷ ದಿನವೇ ಈ ಸ್ಟುಡಿಯೋ ರೀ ಲಾಂಚ್ ಮಾಡಲಿದ್ದಾರೆ. ರೆಡ್ ಥೀಮ್ನಲ್ಲಿ ‘ರೆಡ್ ಕಾರ್ಪೆಟ್ ಸ್ಟುಡಿಯೋ’ ರೀ ಲಾಂಚ್ ಮಾಡಲಾಗುತ್ತಿದೆ ಅನ್ನೋದು ವಿಶೇಷ. ಈಗಾಗಲೇ ಇದರ ಪ್ರಮೋಷನ್ ಭರ್ಜರಿಯಾಗಿ ನಡೆಯುತ್ತಿದೆ.
ದರ್ಶನ್ ಹಾಗೂ ಪವಿತ್ರಾ ಮಧ್ಯೆ ಒಳ್ಳೆಯ ಆಪ್ತತೆ ಇತ್ತು. ಈಗ ಇಬ್ಬರ ನಡುವೆ ಯಾವ ರೀತಿಯ ಒಡನಾಟ ಇದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟನೆ ಇಲ್ಲ. ಫೆಬ್ರವರಿ 16ರಂದು ದರ್ಶನ್ ಜನ್ಮದಿನ. ಆ ದಿನವೇ ಸ್ಟುಡಿಯೋ ರೀ ಲಾಂಚ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅವರ ಜನ್ಮದಿನಕ್ಕೂ ಎರಡು ದಿನ ಮೊದಲು ಈ ಸ್ಟುಡಿಯೋ ಲಾಂಚ್ ಆಗುತ್ತಿದೆ.