ಪಪ್ಪಾಯಿಯು ಭಾರತದಲ್ಲಿ ವ್ಯಾಪಕವಾಗಿ ಸೇವಿಸಲ್ಪಡುವ ಒಂದು ಹಣ್ಣಾಗಿದೆ ಮತ್ತು ಹಲವರ ನೆಚ್ಚಿನ ಹಣ್ಣಾಗಿದೆ. ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ತಿನ್ನಲು ಶಿಫಾರಸು ಮಾಡುತ್ತಾರೆ, ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯಾಗುತ್ತದೆ ಎಂದೂ ಹೇಳಲಾಗುತ್ತದೆ. ಅಲ್ಲದೆ, ಕೆಲವು ರೀತಿಯ ಕಾಯಿಲೆಗಳು ಅಥವಾ ಅಲರ್ಜಿ ಇರುವವರು ಈ ಹಣ್ಣಿನಿಂದ ದೂರವಿರಬೇಕು.
ಎಲ್ಲಾ ಸೀಸನ್ನಲ್ಲಿಯೂ ಲಭ್ಯವಿರುವ ಹಣ್ಣು ಎಂದರೆ ಅದು ಪಪ್ಪಾಯಿ. ಇದು ನಾರಿನಾಂಶ, ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ನಿಯಮಿತವಾಗಿ ತಿನ್ನುವವರಿಗೆ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ರೋಗ ಬರುವ ಅಪಾಯ ಕಡಿಮೆ ಎಂದು ವೈದ್ಯರು ಹೇಳುತ್ತಾರೆ.
ತೂಕ ನಿರ್ವಹಣೆಗೆ ಪಪ್ಪಾಯಿ ಹೆಚ್ಚು ಉಪಯುಕ್ತವಾಗಿದೆ. ಪಪ್ಪಾಯಿಯಲ್ಲಿ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿದ್ದರೂ, ಇದು ಕೆಲವರು ಸೇವಿಸಲು ಸೂಕ್ತವಾದ ಹಣ್ಣಲ್ಲ ಎಂದು ನಿಮಗೆ ತಿಳಿದಿದ್ಯಾ? ಹೌದು, ಪಪ್ಪಾಯಿ ತಿನ್ನುವುದರಿಂದ ಕೆಲವರ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಬಹುದು. ಹಾಗಾದ್ರೆ ಈ ಹಣ್ಣನ್ನು ಯಾರು ತಿನ್ನಬಾರದು ಎಂಬುವುದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.
ಗರ್ಭಿಣಿಯರು: ಗರ್ಭಿಣಿಯರು ಕಟ್ಟುನಿಟ್ಟಾಗಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಗರ್ಭಿಣಿಯರು ಪಪ್ಪಾಯಿ ತಿನ್ನಬಾರದು. ಏಕೆಂದರೆ ಈ ಹಣ್ಣಿನಲ್ಲಿ ಲ್ಯಾಟೆಕ್ಸ್ ಎಂಬ ಸಂಯುಕ್ತವಿದೆ. ಇದು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು ಮತ್ತು ಗರ್ಭಪಾತ ಅಥವಾ ಅಕಾಲಿಕ ಜನನಕ್ಕೆ ಕಾರಣವಾಗಬಹುದು. ಇದರೊಂದಿಗೆ, ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ಗರ್ಭಪಾತಕ್ಕೆ ಕಾರಣವಾಗಬಹುದು.
ಅನಿಯಮಿತ ಹೃದಯ ಬಡಿತದ ಸಮಸ್ಯೆ: ಪಪ್ಪಾಯಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಅನಿಯಮಿತ ಹೃದಯ ಬಡಿತ ಸಮಸ್ಯೆ ಇರುವವರಿಗೆ ಈ ಹಣ್ಣು ಅಷ್ಟೊಂದು ಒಳ್ಳೆಯದಲ್ಲ. ಇದು ಸೈನೋಜೆನಿಕ್ ಗ್ಲೈಕೋಸೈಡ್ಗಳು ಎಂಬ ಮಧ್ಯಮ ಪ್ರಮಾಣದ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಜನ್ ಸೈನೈಡ್ ಅನ್ನು ಉತ್ಪಾದಿಸುತ್ತದೆ. ಪಪ್ಪಾಯಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದರೆ, ಅತಿಯಾಗಿ ತಿನ್ನುವುದರಿಂದ ಅನಿಯಮಿತ ಹೃದಯ ಬಡಿತದ ಅಪಾಯ ಹೆಚ್ಚು. ಹೈಪೋಥೈರಾಯ್ಡಿಸಮ್ ನಿಂದ ಬಳಲುತ್ತಿರುವವರ ಮೇಲೂ ಪಪ್ಪಾಯಿ ನೆಗೆಟಿವ್ ಪರಿಣಾಮ ಬೀರಬಹುದು.
ಲ್ಯಾಟೆಕ್ಸ್ ಅಲರ್ಜಿ: ಲ್ಯಾಟೆಕ್ಸ್ ಅಲರ್ಜಿ ಇರುವವರು ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇದರಲ್ಲಿರುವ ಕೈಟಿನೇಸ್ಗಳು ಎಂಬ ಕಿಣ್ವಗಳು ಲ್ಯಾಟೆಕ್ಸ್ ಪ್ರೋಟೀನ್ಗಳೊಂದಿಗೆ ಅಡ್ಡ-ಪ್ರತಿಕ್ರಿಯೆ ನಡೆಸಿ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಸೀನುವುದು, ಕೆಮ್ಮುವುದು, ಉಸಿರಾಟದ ಸಮಸ್ಯೆ ಮತ್ತು ಕಣ್ಣುಗಳಲ್ಲಿ ನೀರು ಬರುವುದು ಇದರ ಲಕ್ಷಣಗಳಾಗಿವೆ. ಕೆಲವರಿಗೆ ಪಪ್ಪಾಯಿಯ ವಾಸನೆ ಕೂಡ ಬರುವುದಿಲ್ಲ.
ಮೂತ್ರಪಿಂಡದ ಕಲ್ಲುಗಳು: ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯದ ಸ್ಥಿತಿ ಮತ್ತಷ್ಟು ಹದಗೆಡಬಹುದು. ವಿಟಮಿನ್ ಸಿಯ ಅತಿಯಾದ ಸೇವನೆಯು ಕ್ಯಾಲ್ಸಿಯಂ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳನ್ನು ಬೆಳೆಸುವ ಅಪಾಯವನ್ನು ಹೆಚ್ಚಿಸುತ್ತದೆ.
ಲೋ ಬ್ಲಡ್ ಶುಗರ್: ಮಧುಮೇಹವನ್ನು ನಿಯಂತ್ರಿಸಲು ಪಪ್ಪಾಯಿ ಉತ್ತಮ ಮಾರ್ಗವಾಗಿದೆ. ಆದರೆ, ಕಡಿಮೆ ರಕ್ತದಲ್ಲಿನ ಸಕ್ಕರೆ ಮಟ್ಟ (ಹೈಪೊಗ್ಲಿಸಿಮಿಯಾ) ಇರುವವರಿಗೆ ಈ ಹಣ್ಣು ಅಷ್ಟೊಂದು ಒಳ್ಳೆಯದಲ್ಲ. ಈ ಹಣ್ಣು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿದೆ.
ಆದ್ದರಿಂದ, ಈಗಾಗಲೇ ಹೈಪೊಗ್ಲಿಸಿಮಿಯಾ ಇರುವವರು ಪಪ್ಪಾಯಿ ತಿಂದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಇಳಿಯಬಹುದು.