ಸೆಮಿಫೈನಲ್ ಪ್ರವೇಶಿಸಲು ಕಠಿಣ ಸವಾಲು ಎದುರಿಸುತ್ತಿರುವ ಪಾಕಿಸ್ತಾನ ತಂಡ ತನ್ನ 9ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಆಂಗ್ಲರು 2019ರಲ್ಲಿ ಗೆದ್ದ ವಿಶ್ವ ಕಿರೀಟವನ್ನು ಈ ಬಾರಿ ಕಳೆದುಕೊಳ್ಳುವುದು ಈಗಾಗಲೆ ಖಚಿತಗೊಂಡಿರುವ ನಡುವೆ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅರ್ಹತೆಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸುವ ತವಕದಲ್ಲಿದ್ದಾರೆ.
ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 4 ಗೆಲುವು, 4 ಸೋಲಿನ ಸಹಿತ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಾಕಿಸ್ತಾನ, ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಬೇಕಾದರೆ ಬರೀ ಗೆದ್ದರಷ್ಟೇ ಸಾಕಾಗದು. ರನ್ರೇಟ್ನಲ್ಲೂ ನ್ಯೂಜಿಲೆಂಡ್ ತಂಡವನ್ನು ಮೀರಿಸುವುದು ಅಗತ್ಯವಾಗಿದೆ. ಆದರೆ ಇದಕ್ಕಾಗಿ ಪಾಕ್, ಮೊದಲು ಬ್ಯಾಟಿಂಗ್ಗೆ ಇಳಿದಾಗ ಕನಿಷ್ಠ 287 ರನ್ಗಳಿಂದ ಪಂದ್ಯ ಗೆಲ್ಲಬೇಕಾಗಿದೆ. ಒಂದು ವೇಳೆ ಪಾಕ್ ಚೇಸಿಂಗ್ ಮಾಡುವುದಾದರೆ, 284 ಎಸೆತ ಉಳಿದಿರುವಂತೆಯೇ ಗುರಿ ತಲುಪಬೇಕಾಗುತ್ತದೆ. ಅಂದರೆ, ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ಗೆ ಇಳಿದರೆ ಪಾಕಿಸ್ತಾನ ಪಂದ್ಯದ ಮೊದಲ ಎಸೆತಕ್ಕೆ ಮುನ್ನವೇ ಸೆಮೀಸ್ ರೇಸ್ನಿಂದ ಹೊರಬೀಳುತ್ತದೆ.
ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಎಡವಿದ ಬಳಿಕ ಸತತ 4 ಪಂದ್ಯಗಳಲ್ಲಿ ಸೋತಿದ್ದ ಪಾಕ್, ಕಳೆದೆರಡು ಪಂದ್ಯಗಳಲ್ಲಿ ಬಾಂಗ್ಲಾ, ಕಿವೀಸ್ ಎದುರು ಗೆದ್ದು ಕೊನೇ ಪಂದ್ಯದವರೆಗೂ ಸವಾಲು ಜೀವಂತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಗದದ ಮೇಲಿನ ಸೆಮೀಸ್ ಲೆಕ್ಕಾಚಾರಗಳನ್ನು ಮೈದಾನದಲ್ಲಿ ನಿಜವಾಗಿಸುವುದು ಬಹುತೇಕ ಅಸಾಧ್ಯವೆನಿಸಿದೆ.