ಪಾಕಿಸ್ತಾನದ ಜೈಲಿನಲ್ಲಿ ಇರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು 11 ಪ್ರಕರಣಗಳಲ್ಲಿ ಶಂಕಿತೆ ಎಂದು ಗುರುತಿಸಲಾಗಿದೆ. ಕಳೆದ ವರ್ಷದ ಮೇ 9ರಂದು ಸೇನಾ ಮುಖ್ಯ ಕಚೇರಿಯ ಮೇಲೆ ನಡೆದ ದಾಳಿ ಪ್ರಕರಣ ಕೂಡ ಈ 11 ಪ್ರಕರಣಗಳಲ್ಲಿ ಸೇರಿದೆ ಎಂದು ರಾವಲ್ಪಿಂಡಿ ಪೊಲೀಸರು ಇಸ್ಲಾಮಾಬಾದ್ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
49 ವರ್ಷ ವಯಸ್ಸಿನ ಬುಶ್ರಾ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರವನ್ನು ಪೊಲೀಸರು ಹೈಕೋರ್ಟ್ಗೆ ಸಲ್ಲಿಸಿದರು. ಬುಶ್ರಾ ಅವರು ಸದ್ಯ ಪಾಕ್ ಜೈಲಿನಲ್ಲಿದ್ದು, ಅವರ ವಿರುದ್ಧದ ಪ್ರಕರಣಗಳ ವಿವರ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚನೆ ನೀಡಿತ್ತು.
ಅದರಂತೆ ಇದೀಗ ಪೊಲೀಸರು ಬುಶ್ರಾ 11 ಪ್ರಕರಣದಲ್ಲಿ ಶಂಕಿತೆ ಎಂದು ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 2018ರಲ್ಲಿ ಬುಶ್ರಾ ಅವರನ್ನು ಇಮ್ರಾನ್ ಖಾನ್ ಮದುವೆಯಾಗಿದ್ದು ಇಮ್ರಾನ್ ಗೆ ಬುಶ್ರಾ ಮೂರನೆಯ ಪತ್ನಿ.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಬುಶ್ರಾ ಅವರು ಬಹಳ ಪ್ರಭಾವಿ ಎಂದು ಪರಿಗಣಿಸಲಾಗಿತ್ತು. ಆದರೆ ಇಮ್ರಾನ್ ನೇತೃತ್ವದ ಸರ್ಕಾರ ಪತನಗೊಂಡ ನಂತರ ಪತಿ ಹಾಗೂ ಪತ್ನಿಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಬುಶ್ರಾ ಜೈಲಿನಲ್ಲಿದ್ದಾರೆ.