ಇಸ್ಲಾಮಾಬಾದ್: ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಒಟ್ಟು 5128 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರಿಕೆ ಇನ್ಸಾಫ್ (ಪಿಟಿಐ) ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಝ್ ಶರೀಫ್) (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಾಗಿವೆ.
ಪಾಕ್ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಗೆ ಕೆಲವೇ ದಿನಗಳ ಮೊದಲು, ಜನಪ್ರಿಯ ನಾಯಕ, ಪಿಟಿಐ ಪಕ್ಷದ ವರಿಷ್ಠ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿಸಿ ಜೈಲು ಶಿಕ್ಷೆ ಘೋಷಿಸಿದ್ದು ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಅನರ್ಹತೆಯನ್ನು ಘೋಷಿಸಲಾಗಿತ್ತು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಸೇರಿರುವುದರಿಂದ ಹಾಗೂ ಅವರ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದ ಬ್ಯಾಟ್ ಚುನಾವಣಾ ಚಿಹ್ನೆಯನ್ನು ನೀಡಲು ನಿರಾಕರಿಸಿರುವುದರಿಂದ ನವಾಝ್ ಶರೀಫ್ ನೇತೃತ್ವದ ಪಿಎಂಎಲ್(ಎನ್) ಪಕ್ಷಕ್ಕೆ ಗೆಲುವಿನ ಹಾದಿ ಸುಗಮವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಿಎಂಎಲ್ (ಎನ್) ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಫಲವಾದಲ್ಲಿ ನವಾಝ್ ಶರೀಫ್ ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವುದು ಖಚಿತವಾಗಿದೆ.
ಚುನಾವಣಾ ಚಿಹ್ನೆ ನಿರಾಕರಿಸಲ್ಪಟ್ಟ ಹೊರತಾಗಿಯೂ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಅಭ್ಯರ್ಥಿಗಳು ನವಾಝ್ ಶರೀಫ್ ಅವರ ಪಕ್ಷದ ಅಭ್ಯರ್ಥಿಗಳಿಗೆ ಪ್ರಬಲ ಹೋರಾಟ ನೀಡುತ್ತಿದ್ದಾರೆ. ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಕೂಡಾ ಗಮನಾರ್ಹ ಸಾಧನೆಯ ನಿರೀಕ್ಷೆಯಲ್ಲಿದೆ.