ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆ ನಿಯೋಜಿಸಲಾಗಿದೆ. ಸದ್ಯ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇತರ ಪ್ರಮುಖ ಬಂಧಿತ ರಾಜಕೀಯ ವ್ಯಕ್ತಿಗಳು ಅಂಚೆ ಮತಪತ್ರದ ಮೂಲಕ ಜೈಲಿನಿಂದಲೇ ಮತ ಚಲಾಯಿಸಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ, ಅವಾಮಿ ಮುಸ್ಲಿಂ ಲೀಗ್ ಮುಖ್ಯಸ್ಥ ಶೇಖ್ ರಶೀದ್ ಮತ್ತು ಮಾಜಿ ಸಚಿವ ಫವಾದ್ ಚೌಧರಿ ಅಂತೆ ಮೂಲಕ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ(ಸಿಎನ್ಐಸಿ) ಹೊಂದದೆ ಇರುವ ಕಾರಣ ಅಡಿಯಾಲಾ ಜೈಲಿನಲ್ಲಿರುವ 7 ಸಾವಿರ ಕೈದಿಗಳಲ್ಲಿ 100ಕ್ಕಿಂತಲೂ ಕಡಿಮೆ ಕೈದಿಗಳು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಒಟ್ಟು 90,675 ಮತಗಟ್ಟೆಗಳಿರುತ್ತವೆ. ಈ ಕೇಂದ್ರಗಳಲ್ಲಿ 2,76,402 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪಾಕಿಸ್ತಾನದ ಚುನಾವಣಾ ಆಯೋಗದ ಪ್ರಕಾರ, 12.85 ಕೋಟಿಗೂ ಹೆಚ್ಚು ನೋಂದಾಯಿತ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ 5121 ಅಭ್ಯರ್ಥಿಗಳಲ್ಲಿ ಒಟ್ಟು 12,85,85,760 ನೋಂದಾಯಿತ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 4,807 ಪುರುಷರು, 312 ಮಹಿಳೆಯರು ಮತ್ತು ಇಬ್ಬರು ಟ್ರಾನ್ಸ್-ಜೆಂಡರ್ ಅಭ್ಯರ್ಥಿಗಳು ಸೇರಿದ್ದಾರೆ. ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ 12,123 ಪುರುಷರು, 570 ಮಹಿಳೆಯರು ಮತ್ತು ಇಬ್ಬರು ತೃತೀಯಲಿಂಗಿಗಳು ಸೇರಿದಂತೆ 12,695 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 100ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಮತ್ತು ವಿದೇಶಿ ಪತ್ರಕರ್ತರು ಚುನಾವಣೆ ವರದಿ ಮಾಡಲು ದೇಶಕ್ಕೆ ಬಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಿಕಂದನ್ ಸುಲ್ತಾನ್ ರಜಾ ತಿಳಿಸಿದ್ದಾರೆ.