ಕಾಬೂಲ್: ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದ ಬರ್ಮಲ್ ಜಿಲ್ಲೆಯಲ್ಲಿ ಪಾಕಿಸ್ತಾನ ನಡೆಸಿದ ಸರಣಿ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 15 ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿ ಮಾಡಿ ಮಂಗಳವಾರ ರಾತ್ರಿ ದಾಳಿ ನಡೆದಿದೆ. ಲಾಮನ್ ನಲ್ಲಿ ಒಂದೇ ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.
ಪಾಕಿಸ್ತಾನದ ಜೆಟ್ ವಿಮಾನಗಳು ಬಾಂಬ್ ದಾಳಿ ನಡೆಸಿವೆ ಎಂದು ಸ್ಥಳೀಯ ಮೂಲಗಳು ಹೇಳಿವೆ. ಬರ್ಮಲ್ ನ ಮುರ್ಗ್ ಬಜಾರ್ ಗ್ರಾಮ ಸಂಪೂರ್ಣ ಧ್ವಂಸವಾಗಿದ್ದು, ಮಾನವೀಯ ಸಂಘರ್ಷ ಉಲ್ಬಣಿಸಿದೆ.
ವಾಯುದಾಳಿಯಿಂದ ತೀವ್ರ ನಾಗರಿಕ ಸಾವು ನೋವುಗಳು ಸಂಭವಿಸಿದ್ದು, ವ್ಯಾಪಕ ಹಾನಿಯೂ ಆಗಿದೆ. ಇದು ಇಡೀ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಪುನಶ್ಚೇತನ ಪ್ರಯತ್ನಗಳು ನಡೆಯುತ್ತಿದ್ದು, ದಾಳಿಯ ಬಗ್ಗೆ ವಿವರಗಳನ್ನು ದೃಢಪಡಿಸಲು ಮತ್ತು ದಾಳಿಯ ಹೊಣೆಯ ಬಗ್ಗೆ ಸ್ಪಷ್ಟತೆಗಾಗಿ ತನಿಖೆ ಅಗತ್ಯವಾಗಿದೆ ಎಂದು ವರದಿ ಹೇಳಿದೆ. ತಾಲಿಬಾನ್ ನ ರಕ್ಷಣಾ ಸಚಿವಾಲಯ ಬರ್ಮಲ್ ಮತ್ತು ಪಕ್ಟಿಕಾ ಮೇಲಿನ ದಾಳಿಯ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿದೆ.
ದೇಶದ ಭೂಪ್ರದೇಶವನ್ನು ರಕ್ಷಿಸಿಕೊಳ್ಳುವುದು ಮತ್ತು ಸಮಗ್ರತೆಯನ್ನು ಉಳಿಸಿಕೊಳ್ಳುವುದು ಕಾನೂನುಬದ್ಧ ಹಕ್ಕು ಎಂದು ಹೇಳಿರುವ ರಕ್ಷಣಾ ಸಚಿವಾಲಯ, ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ವಜೀರಿಸ್ತಾನಿ ನಿರಾಶ್ರಿತರನ್ನು ಗುರಿ ಮಾಡಿ ದಾಳಿ ಮಾಡಲಾಗಿದೆ ಎಂದು ಆಪಾದಿಸಿದೆ. ದಾಳಿಯನ್ನು ಪಾಕಿಸ್ತಾನ ಸರ್ಕಾರ ದೃಢಪಡಿಸಿಲ್ಲ.