ಪ್ರವಾಸಿ ಬಾಂಗ್ಲಾದೇಶ ತಂಡ ಪಾಕಿಸ್ತಾನ ಎದುರು ಮೊತ್ತ ಮೊದಲ ಟೆಸ್ಟ್ ಗೆದ್ದ ಐತಿಹಾಸಿಕ ಸಾಧನೆ ಮೆರೆದಿದೆ. ಇಲ್ಲಿನ ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡು ಟೆಸ್ಟ್ಗಳ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಆಟವಾಡಿದ ಬಾಂಗ್ಲಾದೇಶ ತಂಡ ಪಂದ್ಯದ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ಆತಿಥೇಯರ ಎದುರು 10 ವಿಕೆಟ್ಗಳ ಬೃಹತ್ ಗೆಲುವು ದಾಖಲಿಸಿತು.
ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾದ ಪಂದ್ಯ ಐದನೇ ಹಾಗೂ ಅಂತಿಮ ದಿನ ಡ್ರಾ ಫಲಿತಾಂಶ ಕಾಣಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಬಾಂಗ್ಲಾ ತಂಡದ ಸ್ಪಿನ್ ಜೋಡಿ ಮೆಹೆದಿ ಹಸನ್ ಮಿರಾಝ್ (21ಕ್ಕೆ 4) ಮತ್ತು ಶಕಿಬ್ ಅಲ್ ಹಸನ್ (44ಕ್ಕೆ 3) ಸ್ಪಿನ್ ಬಲೆ ಹೆಣೆದು ಪಾಕಿಸ್ತಾನದ ಬ್ಯಾಟರ್ಗಳನ್ನು ಬೇಟೆಯಾಡಿದರು. ನೋಡ ನೋಡುತ್ತಿದ್ದಂತೆಯೇ ಎರಡನೇ ಇನಿಂಗ್ಸ್ನಲ್ಲಿ ಪಾಕಿಸ್ತಾನ ತಂಡ 146 ರನ್ಗಳ ಅಲ್ಪ ಮೊತ್ತಕ್ಕೆ ಆಲ್ಔಟ್ ಆಯಿತು.
ಮೊದಲ ಇನಿಂಗ್ಸ್ನಲ್ಲಿ 167 ರನ್ಗಳ ಬೃಹತ್ ಮುನ್ನಡೆ ಗಳಿಸಿದ್ದ ಬಾಂಗ್ಲಾದೇಶ ತಂಡಕ್ಕೆ ಎರಡನೇ ಇನಿಂಗ್ಸ್ನಲ್ಲಿ ಪಂದ್ಯ ಗೆಲ್ಲಲು ಕೇವಲ 30 ರನ್ಗಳ ಗುರಿ ಮಾತ್ರವೇ ಲಭ್ಯವಾಯಿತು. ಬಾಂಗ್ಲಾ ಓಪನರ್ಗಳಾದ ಝಾಕಿರ್ ಹುಸೇನ್ (15*) ಮತ್ತು ಶದ್ನಾಮ್ ಇಸ್ಲಾಮ್ (9*) 7 ಓವರ್ಗಳ ಒಳಗೆ ಬಾಂಗ್ಲಾದೇಶ ತಂಡಕ್ಕೆ ಐತಿಹಾಸಿಕ ಟೆಸ್ಟ್ ಗೆಲುವು ತಂದುಕೊಟ್ಟರು. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ 3ನೇ ಆವೃತ್ತಿಯಲ್ಲಿ ಫೈನಲ್ ತಲುಪುವ ಲೆಕ್ಕಾಚಾರ ಮಾಡಿದ್ದ ಪಾಕಿಸ್ತಾನ ತಂಡಕ್ಕೆ ಈ ಸೋಲು ಮರ್ಮಾಘಾತವನ್ನೇ ನೀಡಿದೆ.