ಮಲೆನಾಡಿನ ಬಹುತೇಕ ಭತ್ತದ ಗದ್ದೆಗಳು ಮಳೆಯಾಶ್ರಿತ ಭೂಮಿಯಾಗಿದೆ. ಜುಲೈ ತಿಂಗಳಿನಲ್ಲಿ ಕೇವಲ 15 ದಿನ ಮಾತ್ರ ಧಾರಾಕಾರ ಮಳೆಯಾಗಿದ್ದು ಬಿಟ್ಟರೆ ಉಳಿದ ದಿನಗಳು ಕೇವಲ ತುಂತುರು ಮಳೆಯಷ್ಟೆ.
ಕೆರೆ, ಹೊಳೆ, ಹಳ್ಳಗಳ ಅಕ್ಕಪಕ್ಕ ಇರುವ ತಗ್ಗಿನ ಗದ್ದೆಯಲ್ಲಿ ತೇವಾಂಶ ಇರುವ ಕಾರಣ ಒಂದಿಷ್ಟು ಭತ್ತದ ಫಸಲು ಕೈಗೆ ದೊರೆತಿದೆ. ಮಕ್ಕಿ ಗದ್ದೆ, ಹಕ್ಕಲು ಪ್ರದೇಶದ ಜಮೀನಿನಲ್ಲಿ ಪ್ರತಿ ವರ್ಷ ಭತ್ತ ಬೆಳೆಯಲಾಗುತ್ತಿದೆ. ಆದರೆ, ಈ ವರ್ಷ ಇಂತಹ ಜಮೀನಿನಲ್ಲಿ ನೀರಿನ ತೀವ್ರ ಕೊರತೆ ಕಾರಣ ನಾಟಿ ಮಾಡಿದ ಒಂದು ತಿಂಗಳಿನಲ್ಲಿಯೇ ಭೂಮಿಯ ತೇವಾಂಶ ಕ್ಷೀಣಿಸಿ ಭತ್ತದ ಸಸಿ ಹುಲುಸಾಗಿ ಬೆಳೆಯಲು ಸಾಧ್ಯವಾಗಿಲ್ಲ.
ಯಂತ್ರಗಳ ಮೂಲಕ ಒಣ ಹುಲ್ಲುಪಿಂಡಿ ಕಟ್ಟಿ ಸಂಗ್ರಹಿಸಲಾಗುತ್ತಿದೆ. ಯಂತ್ರ ಚಲಿಸದ ಚಿಕ್ಕಚಿಕ್ಕ ಗದ್ದೆಗಳ ಭತ್ತದ ಹುಲ್ಲನ್ನು ಹೊರೆ ಕಟ್ಟಿ ರಾಶಿ ಹಾಕಲಾಗುತ್ತಿದೆ. ಒಣ ಹುಲ್ಲಿನ ಇಳುವರಿ ಕಡಿಮೆಯಿರುವ ಕಾರಣ ಹೆಚ್ಚಿನ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಹುಲ್ಲಿನ ಪಿಂಡಿಯೊಂದಕ್ಕೆ ರೂ. 220 ರಿಂದ 240 ರ ವರೆಗೂ ರೈತರು ಮಾರಾಟ ಮಾಡುತ್ತಿದ್ದಾರೆ.