ಬೆಂಗಳೂರು: ಕಾಟೇರ’ ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದು ನಟ ದರ್ಶನ್ & ಟೀಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅವಧಿ ಮೀರಿ ಕಾರ್ಯಾಚರಣೆ ನಡೆಸಿದ ಆರೋಪದಡಿ ಯಶವಂತಪುರದ ಜೆಟ್ ಲ್ಯಾಗ್ ಪಬ್ನ ಬಾರ್ ಪರವಾನಗಿಯನ್ನು 25 ದಿನಗಳ ಕಾಲ ಅಮಾನತುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ದಯಾನಂದ ಆದೇಶ ಹೊರಡಿಸಿದ್ದಾರೆ.
ಕಾಟೇರ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ನಟರಾದ ದರ್ಶನ್, ನಿನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜೆಟ್ಲ್ಯಾಗ್ ಪಬ್ನಲ್ಲಿ ಜ.3ರಂದು ನಿಯಮ ಉಲ್ಲಂಘಿಸಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಈ ಸಂಬಂಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಪಬ್ನ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.
ದರ್ಶನ್ ನಟನೆಯ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆಯಾಗಿತ್ತು. ಸೆಲೆಬ್ರಿಟಿ ಶೋ ಮುಗಿಸಿಕೊಂಡು ಪಕ್ಕದಲ್ಲೇ ಇದ್ದ ಪಬ್ ನಲ್ಲಿ ತಡರಾತ್ರಿವರೆಗೂ ದರ್ಶನ್ ಮತ್ತು ಹಲವು ನಟರು ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಕೂಡ ಆಗಿತ್ತು