ಮಂಡ್ಯ :- ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆಗಳ ಪ್ರಯುಕ್ತ ಪ್ರಸ್ತುತ ವರ್ಷ ‘ನಮ್ಮ ಶೌಚಾಲಯ ನಮ್ಮ ಗೌರವ’ ಎಂಬ ಶೀರ್ಷಿಕೆ ಹಾಗೂ ‘ಅಂದದ ಶೌಚಾಲಯ ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 19 ರಿಂದ ಡಿಸೆಂಬರ್ 10 ರವರೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಚ್ಛ ಬಾರತ ಮಿಷನ್ ಸಭೆಯಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ‘ನಮ್ಮ ಶೌಚಾಲಯ ನಮ್ಮ ಗೌರವ’ ಅಭಿಯಾನವನ್ನು ಕುರಿತು ಮಾತನಾಡಿದರು.
ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ವೈಯುಕ್ತಿಕ ಹಾಗೂ ಸಮುದಾಯ ಶುಚಿತ್ವ ಕುರಿತು ಜಾಗೃತಿ ಮೂಡಿಸಿ, ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಹಾಗೂ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಪ್ರೇರೆಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಕಾಪಾಡಿಕೊಳ್ಳುವಲ್ಲಿ ಈ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಈ ವಿಶೇಷ ಆಂದೋಲನದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಾರ್ಯತ್ಮಕವಲ್ಲದ/ನಿರುಪಯುಕ್ತ ಸಮುದಾಯ ಶೌಚಾಲಯಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುವುದು. ಹಾಗೂ ನೀರು ಮತ್ತು ನೈರ್ಮಲ್ಯ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರಸ್ತುತ ಸ್ಥಿತಿಗತಿ ಮತ್ತು ತೆಗೆದುಕೊಳ್ಳಬೇಕಾದ ಪರಿಹಾರ/ಯೋಜನಾ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದರು.
ನಿರುಪಯುಕ್ತ ಸಮುದಾಯ ಶೌಚಾಲಯಗಳ ದುರಸ್ಥಿ, ಮರುಸ್ಥಾಪನೆ ಮತ್ತು ಪರಿಷ್ಕರಣೆಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಇದರೊಂದಿಗೆ ವೈಯುಕ್ತಿಕ/ಸಮುದಾಯ ಶೌಚಾಲಯಗಳ ಅಂದವನ್ನು ಹೆಚ್ಚಿಸಲು ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಸಮುದಾಯವನ್ನು ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ಈ ವಿಶೇಷ ಆಂದೋಲನದ ಪ್ರಯುಕ್ತ ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕೆಗೆ ಉತ್ತೇಜನ, ವೈಯುಕ್ತಿಕ ಗೃಹ ಶೌಚಾಲಯಗಳಿಗೆ ಕಾರ್ಯಾದೇಶ ಹಾಗೂ ಪ್ರೋತ್ಸಾಹಧನ ಮಂಜೂರಾತಿ ಆದೇಶ ಪತ್ರಗಳನ್ನ ವಿತರಿಸಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಹಂತದಲ್ಲಿ ಸ್ವಚ್ಛ, ಸುಂದರ ವೈಯುಕ್ತಿಕ ಗೃಹ ಶೌಚಾಲಯಗಳ ಮತ್ತು ಸಮುದಾಯ ಶೌಚಾಲಯಗಳ ಅಂತಿಮ ಸಮೀಕ್ಷೆ ನಡೆಸಿ, ಶೌಚಾಲಯಗಳ ಕಾರ್ಯನಿರ್ವಹಣೆ, ಶೌಚಾಲಯಗಳನ್ನು ಸುಂದರಗೊಳಿಸಲು, ಬಿಡಿಸಿರುವ ಚಿತ್ರಕಲೆ, ಗೋಡೆ ಬರಹಗಳ ಕುರಿತು ಮೌಲ್ಯಮಾಪನ ನಡೆಸಿ, ಪುರಸ್ಕಾರ/ಪ್ರಶಂಸನಾ ಪತ್ರ ನೀಡಲಾಗುವುದು ಎಂದು ಹೇಳಿದರು.
ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳು, ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳು, ಸ್ವಯಂ ಸೇವಾ ಸಂಸ್ಥೆಗಳಲ್ಲಿರುವ ಶೌಚಾಲಯಗಳನ್ನ ಬಳಸಲು ಪ್ರೇರೇಪಿಸುವುದು ಹಾಗೂ ನಿರುಪಯುಕ್ತ/ ದುರಸ್ಥಿ ಶೌಚಾಲಯಗಳನ್ನ ಗುರುತಿಸಿ, ನವೀಕರಣಗೊಳಿಸಿ ಕಡ್ಡಾಯವಾಗಿ ಬಳಸಿ, ಶುಚಿತ್ವ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು ಈ ವಿಶೇಷ ಆಂದೋಲನದ ಉದ್ದೇಶವಾಗಿರುತ್ತದೆ ಎಂದರು.
ಸಭೆಯಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.