ಬೆಂಗಳೂರು:- ಲೋಕಸಭೆ ಚುನಾವಣೆ ಹಿನ್ನೆಲೆ, ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಎಲ್ಲರೂ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ.
ನಾವು ಇಬ್ಬರೂ ಸೇರಿ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಮಾಡಿದ ಚರ್ಚೆಯನ್ನು ಬಹಿರಂಗವಾಗಿ ಹೇಳಲ್ಲ. ವಿಜಯೇಂದ್ರ ಅವರು ಈಗ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಅವರ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ನಿನ್ನೆ ನಾನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಸುನೀಲ್ ಕುಮಾರ್ ಅವರು ಸೇರಿ ಚರ್ಚೆ ಮಾಡಿ, ಸಹಕಾರ ಕೊಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಗೆಲುವಿಗಾಗಿ ಎಲ್ಲಾ ನಾಯಕರು ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದರು.
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಇವತ್ತು ನಮ್ಮ ಬಳಿ ಬಂದಿದ್ದಾರೆ. ಎಲ್ಲವೂ ಈಗ ಸರಿಯಾಗಿದೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು ಅಸಮಾಧಾನ ತೋರಿಸಲ್ಲ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ, ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕರಾಗಿ ಒಪ್ಪಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಸಹಕಾರ ಕೊಡುತ್ತೇವೆ. ಬಿಜೆಪಿಯಲ್ಲಿ ಪಕ್ಷ ಸಂಘಟನೆ ಶುರು ಮಾಡುತ್ತೇವೆ. ಅಸಮಾಧಾನ ಇತ್ತು, ನಾವೂ ಮನುಷ್ಯರೇ ಅಲ್ವಾ?. ಈಗ ನಮ್ಮ ಟಾಸ್ಕ್ ಮೋದಿಯವರನ್ನು ಮತ್ತೆ ದೇಶದ ಪ್ರಧಾನಿ ಮಾಡೋದು. ಈಗ ಅಸಮಧಾನ ಇಲ್ಲ, ಎಲ್ಲವೂ ಸರಿ ಹೋಗಿದೆ ಎಂದು ಹೇಳಿದರು.