ಆಸ್ಕರ್ ಪ್ರಶಸ್ತಿ ವಿಜೇತ, ಹಾಲಿವುಡ್ ನಟ ಜೀನ್ ಹ್ಯಾಕ್ಮನ್ ಮತ್ತು ಪತ್ನಿ ಬೆಟ್ಸಿ ಅರಕಾವಾ ಮೆಕ್ಸಿಕೋದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರ ಜೊತೆಗೆ ಇವರ ಮುದ್ದಿನ ಸಾಕು ನಾಯಿ ಶವ ಕೂಡ ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾನ ಶುರುವಾಗಿದೆ.
ನಟ ಜೀನ್ ಹ್ಯಾಕ್ಮನ್ಗೆ 95 ವರ್ಷ ಮತ್ತು ಪತ್ನಿ ಬೆಟ್ಸ್ಗೆ 63 ವರ್ಷ ಆಗಿದ್ದು ಸಾವಿಗೆ ನಿಖರವಾದ ಕಾರಣ ಬಹಿರಂಗವಾಗಿಲ್ಲ. ದಂಪತಿ ತಮ್ಮಸಾಕು ನಾಯಿಯೊಂದಿಗೆ ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಮಾಡುತ್ತಿದ್ದು ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೀನ್ ಹ್ಯಾಕ್ಮನ್ ಎರಡು ದಶಕಗಳಿಂದ ನಟನೆಯಿಂದ ನಿವೃತ್ತರಾಗಿದ್ದು ಅವರ ಪತ್ನಿ ಬೆಟ್ಸಿ ಶಾಸ್ತ್ರೀಯ ಪಿಯಾನೋ ವಾದಕರಾಗಿದ್ದರು. ಹ್ಯಾಕ್ಮನ್ ಎರಡು ಬಾರಿ ವಿವಾಹವಾಗಿದ್ದು ಕ್ರಿಸ್ಟೋಫರ್, ಎಲಿಜಬೆತ್ ಜೀನ್ ಮತ್ತು ಲೆಸ್ಲಿ ಅನ್ನಿ ಎಂಬ ಮೂವರು ಮಕ್ಕಳನ್ನು ಹೊಂದಿದ್ದು ಮೊದಲ ಪತ್ನಿ ಫಾಯೆ ಮಾಲ್ಟೀಸ್ ಅವರು 2017ರಲ್ಲಿ ನಿಧನರಾದರು.
ಜೀನ್ ಹ್ಯಾಕ್ಮನ್ 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿವಿಧ ಟಿವಿ ಮಾಧ್ಯಮ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಜೀನ್ ಹ್ಯಾಕ್ಮ್ಯಾನ್ ಒಬ್ಬ ಉತ್ತಮ ನಟರಾಗಿದ್ದು, 1972 ರ ಚಲನಚಿತ್ರದ ಫ್ರೆಂಚ್ ಕನೆಕ್ಷನ್ನಲ್ಲಿನ ಅಭಿನಯಕ್ಕಾಗಿ ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದರು.
ಎರಡು ಆಸ್ಕರ್ಗಳ ಜೊತೆಗೆ, ಎರಡು BAFTA ಪ್ರಶಸ್ತಿಗಳು ಮತ್ತು ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 1930 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ ಹ್ಯಾಕ್ಮನ್ 16 ನೇ ವಯಸ್ಸಿನಲ್ಲಿ ಮೆರೈನ್ ಕಾರ್ಪ್ಸ್ಗೆ ಸೇರ್ಪಡೆಗೊಂಡಿದ್ದು 1947 ರಿಂದ 1952 ರವರೆಗೆ ಕ್ಷೇತ್ರ ರೇಡಿಯೊ ಆಪರೇಟರ್ ಆಗಿ ಸೇವೆ ಸಲ್ಲಿಸಿದ್ದು ಬ್ರಾಡ್ ಕಾಸ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ‘ವೆಲ್ ಕಮ್ ಟು ಮೂಸ್ಪೋರ್ಟ್’ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.