ಹುಬ್ಬಳ್ಳಿ: ದೇಶದ ಪ್ರಜಾಪ್ರಭುತ್ವದ ದೇಗುಲವಾಗಿರುವ ಸಂಸತ್ ಮೇಲೆ ಅಧಿವೇಶನ ನಡೆದ ಸಮಯದಲ್ಲಿ, ಆರು ಜನರು ಸೇರಿ ಕುತಂತ್ರದಿಂದ ಸಂಸತ್ ಒಳಗೆ ದಾಳಿ ಮಾಡಿ ಸ್ಮೋಕ್ ಬಾಂಬ್ ಸಿಡಿಸಿ, ದೇಶದ ಮಾನ ಹರಾಜು ಹಾಕಿರುವ ಈ ಕೃತ್ಯವು ಯಾವುದೇ ಭಯೋತ್ಪಾದನೆ ಕೃತ್ಯಕ್ಕೆ ಕಡಿಮೆ ಇಲ್ಲದಂತಹ ಹಾಗೂ ದೇಶದ್ರೋಹಕ್ಕೆ ಸಮನಾದ ಕೆಲಸವಾಗಿದೆ ಎಂದು ಖಂಡಿಸುತ್ತಾ,ಇವರನ್ನು ಯಾವುದೇ ಕಾರಣಕ್ಕೂ ಕ್ಷಮೆ ತೋರದೆ ದೇಶದ್ರೋಹದ ಕಾಯ್ದೆ ಅಡಿ ಇವರನ್ನು ಶಿಕ್ಷಿಸಬೇಕೆಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಭಾಸ್ಕರ ಜಿತೂರಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದೇಶದ್ರೋಹಿ ಕೃತ್ಯ ನಡೆಸಿರುವವರನ್ನು ಖಂಡಿಸುವುದನ್ನು ಬಿಟ್ಟು,ಇವರಿಗೆ ಸಂಸತ್ ಪ್ರವೇಶದ ಪಾಸು ನೀಡಿರುವ ಸಂಸದರಾದ ಶ್ರೀ ಪ್ರತಾಪ ಸಿಂಹರನ್ನು ಸಂಸದರ ಸ್ಥಾನದಿಂದ ಉಚ್ಛಾಟಿ ಸಬೇಕೆಂದು ವಿಪಕ್ಷಗಳ ಆಗ್ರಹದಲ್ಲಿ ರಾಜಕೀಯದ ವಾಸನೆ ಎದ್ದು ಕಂಡು ಬರುತ್ತಿದೆ. ಈ ಕು ಕೃತ್ಯ ಮಾಡಿ ದೇಶದ ಮಾನ ಹರಾಜು ಹಾಕಿರುವವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಅಥವಾ ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯುವುದು ಬಿಟ್ಟು, ರಾಜಕೀಯವಾಗಿ ಅನುಕೂಲ ಮಾಡಿಕೊಳ್ಳುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಸಂಸದರಾದ ಪ್ರತಾಪ ಸಿಂಹರ ಸಂಸದರ ಸ್ಥಾನದಿಂದ ಉಚ್ಚಾಟನೆಗೆ ವಿಪಕ್ಷಗಳು ಆಗ್ರಹಿಸುತ್ತಿರುವುದನ್ನು ನೋಡಿದರೆ, ಸಂಸತ್ತಿಗೆ ಪ್ರವೇಶ ಪಾಸು ನೀಡಿ ಮೋಸ ಹೋಗಿರುವ ಸಂಸದರಾದ ಪ್ರತಾಪ್ ಸಿಂಹರ ಪರಿಸ್ಥಿತಿಯನ್ನು, ಅನುಕಂಪ ದೃಷ್ಟಿಯಿಂದ ನೋಡದೆ ,ಮೋಸ ಮಾಡಿದವರನ್ನು ಬಿಟ್ಟು ಮೋಸ ಹೋದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುವಂತೆ ಕಾಣುತ್ತಿದ್ದು,ಇದು ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಲೇಬೇಕಾಗುತ್ತದೆ. ಈ ಪ್ರಕರಣವು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತಿದ್ದು ಈ ಬಗ್ಗೆ ಕೇಂದ್ರ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಿದರು.