ಬೆಂಗಳೂರು:- ಕರವೇ ನಾರಾಯಣ ಗೌಡರ ಬಂಧನಕ್ಕೆ ಆಕ್ರೋಶ ಭುಗಿಲೆದ್ದಿದ್ದು, ನಾಳೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ.
ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಸಿಡಿದೆದ್ದಿದ್ದ ಕರ್ನಾಟಕ ರಕ್ಷಣಾ ವೇದಿಕೆಗೆ ಪೊಲೀಸ್ ಇಲಾಖೆ ಶಾಕ್ ನೀಡಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡರನ್ನು ಬಂಧಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇನ್ನು ಸರ್ಕಾರದ ಈ ನಡೆಗೆ ತೀವ್ರ ಅಸಮಾಧಾನಗೊಂಡಿರುವ ಕರವೇ ಕಾರ್ಯಕರ್ತರು ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಮೂಲಕ ನಾರಾಯಣ ಗೌಡರ ಬಿಡುಗಡೆಗೆ ಒತ್ತಾಯಿಸಲಾಗುತ್ತಿದೆ. ಈ ನಡುವೆ, ಕರವೇಯ ಪ್ರವೀಣ್ ಶೆಟ್ಟಿ ಬಣ ಕೂಡಾ ಈ ಹೋರಾಟಕ್ಕೆ ಬೆಂಬಲ ನೀಡಿದೆ.
ಬುಧವಾರ ರಾಜಧಾನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಹೋರಾಟ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎನ್ನೋ ಮಾತನ್ನ ಗಟ್ಟಿಯಾಗಿ ಉಳಿಯುವಂತೆ ಮಾಡಿತ್ತು. ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಕಡ್ಡಾಯ ಎಂಬ ಆದೇಶ ಇದ್ದರೂ ಅನ್ಯಭಾಷೆಯ ನಾಮಫಲಕಗಳನ್ನು ಹಾಕಿದ್ದ ವಾಣಿಜ್ಯ ಮಳಿಗೆಗಳ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನ ಕರವೇ ಕಾರ್ಯಕರ್ತರು ಪುಡಿ ಪುಡಿ ಮಾಡಿದ್ದರು.
ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಹೋರಾಟದ ಕಿಚ್ಚು ಜೋರಾಗಿತ್ತು, ಪ್ರತಿಭಟನೆಯ ರಾತ್ರೋರಾತ್ರಿಯೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಹಾಗೂ ಕರವೇಯ 29 ಮುಖಂಡರನ್ನು ಬಂಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ಬಂಧಿತ ನಾರಾಯಣ ಗೌಡರು ಮತ್ತು ಕರವೇ ಮುಖಂಡರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಲಿದೆ. ಜತೆಗೆ ರಾಜ್ಯಾ ದ್ಯಂತ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಲಾಗಿದೆ.
ಇದಕ್ಕೆ ಬೆಂಬಲ ಎನ್ನುವಂತೆ ಕರವೇ ಕಾರ್ಯಕರ್ತರಿಗೆ ಬೆಂಬಲ ನೀಡಲು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇಧಿಕೆಯ ಪ್ರವೀಣ್ ಶೆಟ್ಟಿ ಬಣವು ಸಾಥ್ ನೀಡಲಿವೆ.