ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟ ಹಗರಣಗಳ ಗಂಭೀರ ಚರ್ಚೆಯ ದಿಕ್ಕು ತಪ್ಪಿಸಿ ಜನರ ಗಮನ ಬೇರೆಡೆ ಸೆಳೆಯಲು ಕೆಲವು ಘಟನೆಗಳನ್ನು ಸೃಷ್ಟಿಮಾಡುತ್ತಿದೆ. ಅದರ ಒಂದು ಭಾಗವಾಗಿ ಹಿಂದೂ ಸಮುದಾಯದ ಭಾವನೆ ಕೆರಳಿಸಲು ಗಣೇಶೋತ್ಸವ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಮತಾಂಧ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ.
ಈ ಹಿನ್ನಲೆಯಲ್ಲಿ ಗಣೇಶೋತ್ಸವಗಳ ಮೇಲೆ ಕ್ಷುದ್ರ ಶಕ್ತಿಗಳ ಅಟ್ಟಹಾಸ ನಿರಂತರವಾಗಿ ಸಾಗಿದೆ. ನಾಗಮಂಗಲದ ಘಟನೆ ಮಾಸುವ ಮುನ್ನವೇ ತಡರಾತ್ರಿ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದಾಳಿ ನಡೆದಿರುವ ಘಟನೆ ಗಮನಿಸಿದರೆ ಕಾನೂನು ಸುವ್ಯವಸ್ಥೆಯ ವಿಫಲತೆ ಹಾಗೂ ಗೃಹ ಇಲಾಖೆಯ ಸಂಪೂರ್ಣ ನಿಷ್ಕ್ರಿಯತೆ ಎದ್ದುಕಾಣುತ್ತದೆ, ಹಿಂದೂ ಉತ್ಸವ ಹಾಗೂ ಆಚರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಾಳಿರುವ ಉಪೇಕ್ಷೆ ಧೋರಣೆಯನ್ನು ಸರಣೀ ಘಟನೆಗಳು ಸಾಕ್ಷಿಕರಿಸುತ್ತಿವೆ. ಘಟನೆಯ ವೀಡಿಯೋ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತಾಂಧ ಕಿಡಿಗೇಡಿಗಳು ಕಾಂಗ್ರೆಸ್ ಸರ್ಕಾರ ತಮ್ಮ ರಕ್ಷಣೆಗಿದೆ ಎಂಬ ನಂಬಿಕೆಯಲ್ಲೇ ದಾಳಿ ನಡೆಸುತ್ತಿರುವ ಪರಿ ಗೋಚರವಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.