ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಾಮಾನ್ಯ ಪ್ರವೇಶ ಪರೀಕ್ಷೆ (KCET-24) ನಡೆಸುವ ದಿನಾಂಕವನ್ನು ಎರಡು ದಿನಗಳ ಮಟ್ಟಿಗೆ ಹಿಂದೂಡಿದ್ದು, ಆ ಪ್ರಕಾರ ಏಪ್ರಿಲ್ 18 ಮತ್ತು 19ರಂದು ಪರೀಕ್ಷೆಗಳು ನಡೆಯಲಿವೆ. ಈ ಮುಂಚೆ ಏಪ್ರಿಲ್ 20 ಮತ್ತು 21ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿತ್ತು.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಏಪ್ರಿಲ್ 21ರಂದು ಎನ್ಡಿಎ (NDA) ಪರೀಕ್ಷೆ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ ಕೆಸಿಇಟಿ ಕನ್ನಡ ಪರೀಕ್ಷೆ ಏಪ್ರಿಲ್ 20ರಂದು ನಡೆಯಲಿದೆ. ವೃತ್ತಿಪರ ಕೋರ್ಸುಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅದಕ್ಕೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಕೆಸಿಇಟಿ-240 ಪರೀಕ್ಷೆ ತೆಗೆದುಕೊಳ್ಳುವುದಕ್ಕಾಗಿ ಜನವರಿ 10ರಿಂದ (ಬುಧವಾರ) ಫೆಬ್ರವರಿ 10ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮೆಡಿಕಲ್ / ಡೆಂಟಲ್ / ಆಯುಷ್ / ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸುಗಳಿಗೆ ಸೇರಲು ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಯುಜಿನೀಟ್-2024 ಫಲಿತಾಂಶಗಳ ಪ್ರಕಟಣೆಯ ನಂತರ ಕೆಇಎನಲ್ಲಿ ನೋಂದಾಯಿಸಲಾಗಿರುವ ಅಭ್ಯರ್ಥಿಗಳಿಗೆ ನೀಟ್ ಸ್ಕೋರ್ ಮತ್ತು ರೋಲ್ ನಂಬರ್ ದಾಖಲಿಸಲು ಇಂಟರ್ಫೇಸ್ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮೊಬೈಲ್ ಆ್ಯಪ್ ಅಭಿವೃದ್ಧಿ:
ಇದರ ಜೊತೆಗೆ, ಸುಧಾರಣೆಯ ಮತ್ತೊಂದು ಕ್ರಮವಾಗಿ ಕೆಇಎ ಮೊಬೈಲ್ ಆಪ್ ಅಭಿವೃದ್ಧಿಪಡಿಸಿದ್ದು, ಇದನ್ನು ಕೆಇಎ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಿಂದಾಗಿ ಪರೀಕ್ಷಾ ವೇಳಾಪಟ್ಟಿ, ಸೂಚನೆ, ಅರ್ಜಿ ಪ್ರಕ್ರಿಯೆ ಯಾವ ಹಂತದಲ್ಲಿದೆ ಇತ್ಯಾದಿ ಮಾಹಿತಿಯನ್ನು ವಾಟ್ಸಪ್ ಮೆಸೇಜ್ ಮೂಲಕವೇ ಪಡೆಯಬಹುದು. ಇದು, ಅಭ್ಯರ್ಥಿಗಳು ಪದೇಪದೇ ವೆಬ್ಸೈಟ್ಗೆ ಹೋಗಿ ಪರಿಶೀಲಿಸಬೇಕಾದ ಅಗತ್ಯವನ್ನು ತಪ್ಪಿಸುತ್ತದೆ. ಶುಲ್ಕ ಪಾವತಿ ಹಾಗೂ ಅರ್ಜಿಗೆ ಸಂಬಂಧಿಸಿದ ವಿವರಗಳು ಅಭ್ಯರ್ಥಿಗಳ ಪೋರ್ಟಲ್ನಲ್ಲಿ (ಕ್ಯಾಂಡಿಡೇಟ್ ಪೋರ್ಟಲ್) ಲಭ್ಯವಿರುತ್ತದೆ