ಮೈಸೂರು : ಹುಣಸೂರು ತಾಲೂಕು ಚಿಕ್ಕಹುಣಸೂರಿನ ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಒಂದೇ ಕೊಠಡಿ ಇರುವ ಕಾರಣಕ್ಕೆ ಜಗುಲಿ ಮೇಲೆ ಪಾಠ ಪ್ರವಚನ ಕೇಳುವ ದುಸ್ಥಿತಿ ಎದುರಾಗಿದೆ. ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ಈ ಸರ್ಕಾರಿ ಶಾಲಾ ಮಕ್ಕಳು ಪಾಠ ಪ್ರವಚನಕ್ಕೆ ಜಗುಲಿ ಆಶ್ರಯ ಪಡೆಯುವಂತಾಗಿದೆ.
ಒಂದರಿಂದ ಏಳನೇ ತರಗತಿವರೆಗೂ ಇದ್ದರೂ ಸೂಕ್ತ ತರಗತಿಗಳಿಲ್ಲ. ಶಾಲೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು,
ಏಳು ತರಗತಿಗಳಿಗೆ ಇರುವುದು ಒಂದೇ ಕೊಠಡಿಯಾಗಿದೆ. ಮಕ್ಕಳು ಶಾಲೆಯ ಹೊರ ಆವರಣದ ಜಗುಲಿ ಮೇಲೆ ಕೂತು ಪಾಠ ಕೇಳುವಂತಾಗಿದೆ. ಇನ್ನು ಶಾಲೆಗೆ ಆಟದ ಮೈದಾನ ಮರೀಚೆಕೆಯಾಗಿದೆ. ಶಾಲೆಯ ಮುಂಭಾಗದಲ್ಲಿ ಹರಿಯುವ ಚರಂಡಿ ನೀರು
ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಮಳೆ ಬಂದರಂತೂ ಮಕ್ಕಳ ಸ್ಥಿತಿ ಅದೋ ಗತಿ ಇಳಿಯುತ್ತದೆ. ಈ ಶಾಲೆಗೆ 25 ಗುಂಟೆ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ 2021 ರಲ್ಲೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹುಣಸೂರು ತಹಸೀಲ್ದಾರ್ ಗೆ ಪತ್ರ ರವಾನೆಯಾಗಿದೆ.
ಹೀಗಿದ್ದರೂ ತಹಸೀಲ್ದಾರ್ ಕಚೇರಿಯಿಂದ ಯಾವುದೇ ಕ್ರಮ ಜರುಗಿಲ್ಲ. ಖಾಸಗಿ ಶಾಲೆಗಳ ಪ್ರವಾಹದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಲಾರಂಭಿಸಿವೆ. ಈ ಶಾಲೆಗೆ ಪ್ರವೇಶಾತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದರೂ ಸರ್ಕಾರದ ಸೌಲಭ್ಯಗಳು ಇಲ್ಲದ ಕಾರಣ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿದೆ.