ಕಾರವಾರ: ಅಯೋಧ್ಯೆಯ ಶ್ರೀರಾಮ ಮಂದಿರ (Ram Mandir) ಉದ್ಘಾಟನೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡಲು ಮುಂದಾಗಿರುವುದು ಸರಿಯಲ್ಲ. ಬಿಜೆಪಿಯವರಿಗೆ ನಿಜವಾದ ರಾಮಭಕ್ತಿಯಿದ್ದರೆ ಪಕ್ಷಾತೀತವಾಗಿ ಆಹ್ವಾನ ನೀಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ (Mankala Vaidya) ಒತ್ತಾಯಿಸಿದ್ದಾರೆ.
ಕಾರವಾರದಲ್ಲಿ (Karwar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೂ ಶ್ರೀರಾಮನ ಭಕ್ತ. ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ಆಹ್ವಾನ ಬಂದರೂ ಬಾರದಿದ್ದರೂ ಅಯೋಧ್ಯೆಗೆ (Ayodhya) ತೆರಳುತ್ತೇನೆ. ಜ.22ಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇನೆ. ಆಗ ಆಗದಿದ್ದರೆ ನಂತರವಾದರೂ ತೆರಳಿ ಶ್ರೀರಾಮನ ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಮೊದಲ ಆರತಿ ಪ್ರಧಾನಿ ನರೇಂದ್ರ ಮೋದಿಯಿಂದ ಮಾಡಿಸುವ ವಿಚಾರದ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು, ಪ್ರಧಾನಿ ಮೋದಿ ಆರತಿ ಮಾಡಬಾರದು, ಮಾಡ್ಬೇಕು ಅಂತಾ ಹೇಳಲ್ಲ. ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಾವು ಬ್ರಾಹ್ಮಣರತ್ರ ಪೂಜೆ ಮಾಡಿಸ್ತೇವೆ. ನಾವು ದೇವರ ಹತ್ರ ಇಟ್ಟದ್ದು ಬ್ರಾಹ್ಮಣರನ್ನು, ನಮ್ಮಲ್ಲಿ ಅಷ್ಟು ಭಕ್ತಿಯಿಂದ ಮಾಡಲಾಗಲ್ಲ ಅನ್ನೋ ಕಾರಣಕ್ಕೆ, ಬ್ರಾಹ್ಮಣರ ಕೈಯಲ್ಲಿ ಪೂಜೆ ಮಾಡಿಸಿದ್ರೆ ನಮಗೆ ನೆಮ್ಮದಿಯಾಗ್ತದೆ. ನಮ್ಮ ಭಾವನೆಯಿದು, ನಾವು ಬ್ರಾಹ್ಮಣರತ್ರ ಪೂಜೆ ಮಾಡಿಸ್ತೇವೆ. ಶಾಸ್ತ್ರೋಕ್ತವಾಗಿ ಒಳ್ಳೆಯ ಬ್ರಾಹ್ಮಣರಿಂದ ಯೋಗ್ಯವಾಗಿ, ರಾಮನಿಗೆ ತೃಪ್ತಿಯಾಗುವಂತೆ, ದೇಶದಲ್ಲಿ ಮಳೆ ಬೆಳೆಯಾಗುವಂತೆ ಪ್ರಾರ್ಥನೆ ಮಾಡಿಸ್ತೇವೆ. ಅದರಲ್ಲೇ ರಾಜಕಾರಣ ಮಾಡಬೇಕು ಅನ್ನೋರಿಗೆ ಏನೂ ಮಾಡಲಾಗಲ್ಲ ಎಂದು ಹೇಳಿದರು.
ರಾಮನ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವವರನ್ನು ರಾಮನೇ ನೋಡಿಕೊಳ್ಳುತ್ತಾನೆ. ನಮಗೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಜೆಪಿಗರ ಸಂಸ್ಕೃತಿ. ದುಡ್ಡು ನಮ್ಮದು ರಾಮಮಂದಿರ ಕಟ್ಟಿದೋರು ನಾವು, ಸರ್ಕಾರದ ದುಡ್ಡು, ಜನರ ದುಡ್ಡು ಇದು. ಆಮಂತ್ರಣ ಪತ್ರ ನೀಡದಿದ್ರೆ ಬಿಜೆಪಿಯವರು ಉದ್ದೇಶಪೂರ್ವಕವಾಗಿ ನಡೆಸ್ತಿದ್ದಾರೆ ಎಂದರ್ಥ, ರಾಮ ನೋಡಿಕೊಳ್ತಾನೆ ಎಂದು ಅಸಮಾಧಾನ ಹೊರಹಾಕಿದ್ದಾರೆ