ಕೋಲಾರ – ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರರ ಆಪ್ತ ‘ಕುಡಾ’ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ವಿಜಯೇಂದ್ರ ನೇಮಕ ಮಾಡಿದ್ದು, ಅದರಲ್ಲಿ ಕೋಲಾರ ಜಿಲ್ಲಾ ಘಟಕಕ್ಕೂ ನೇಮಕ ನಡೆದಿದೆ. ಈ ಕುರಿತು ಪಕ್ಷದ ಚುನಾವಣಾ ಉಸ್ತುವಾರಿ ಅಶ್ವತ್ಥನಾರಾಯಣ ಹಾಗೂ ಜಿಲ್ಲಾ ಚುನಾವಣಾ ಸಹ ಉಸ್ತುವಾರಿ ಬಿ.ಪಿ.ವೆಂಕಟಮುನಿಯಪ್ಪ ಘೋಷಣೆ ಮಾಡಿದರು.
ಓಂಶಕ್ತಿ ಚಲಪತಿ ಈ ಹಿಂದೆ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ರೀತಿಯಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸುವ ಕೆಲಸ ಮಾಡುತ್ತೇನೆ. ಮುಂದೆ ಕನಿಷ್ಠ ನಾಲ್ಕು ಶಾಸಕರು ಜಿಲ್ಲೆಯಿಂದ ಆಯ್ಕೆಯಾಗುವಂತೆ ಕೆಲಸ ಮಾಡುತ್ತೇನೆ ಎಂದರು.