ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಒಮರ್ ಅಬ್ದುಲ್ಲಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹತ್ತು ವರ್ಷಗಳ ಬಳಿಕ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದ್ದು, ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಾಡದ ಬಳಿಕ ಆಯ್ಕೆಯಾದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.
ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್ಕೆಐಸಿಸಿ)ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಮಾಣವಚನ ಬೋಧಿಸಿದರು. ಒಮರ್ ಅಬ್ದುಲ್ಲಾ ಜೊತೆಗೆ ಶಾಸಕರಾದ ಸತೀಶ್ ಶರ್ಮಾ (ಸ್ವತಂತ್ರ), ಸಕಿನಾ ಇಟೂ, ಜಾವಿದ್ ದಾರ್, ಸುನ್ರಿಂದರ್ ಚೌಧರಿ ಮತ್ತು ಜಾವಿದ್ ರಾಣಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಸ್ಪಿ ನಾಯಕ ಅಖಿಲೇಶ್ ಯಾದವ್, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಭಾಗಿಯಾಗಿದ್ದರು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ , ಎನ್ಸಿ ಸರ್ಕಾರವನ್ನು ಸೇರದೇ ಬಾಹ್ಯ ಬೆಂಬಲವನ್ನು ನೀಡಿದೆ. ಈ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ,
ಜಮ್ಮು ಕಾಶ್ಮೀರಕ್ಕೆ ರಾಜ್ಯತ್ವ ಮರುಸ್ಥಾಪನೆವರೆಗೂ ನಾವು ಸರ್ಕಾರದ ಭಾಗವಾಗುತ್ತಿಲ್ಲ, ನಾವು ಅತೃಪ್ತಗೊಂಡಿದ್ದೇವೆ. ನಾವು ಯಾವುದೇ ಸಚಿವ ಸ್ಥಾನ ಪಡೆಯುತ್ತಿಲ್ಲ, ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಒಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯವನ್ನು ತಾರಿಕ್ ಹಮೀದ್ ಕರ್ರಾ ಇದೇ ವೇಳೆ ತಳ್ಳಿಹಾಕಿದರು.