ಬೆಂಡೆಕಾಯಿ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ನಮ್ಮ ದೇಶದಲ್ಲಿ ಹಲವು ಬಗೆಯ ಅಡುಗೆಗಳಲ್ಲಿ ಬಳಸುತ್ತಾರೆ. ತಿನ್ನಲು ರುಚಿಯಾಗಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೆಂಡೆಕಾಯಿ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಇದು ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ ಅನ್ನು ಹೊಂದಿರುತ್ತದೆ.
ಬೆಂಡೆಕಾಯಿಯಲ್ಲಿರುವ ಪೆಕ್ಟಿನ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಮಧುಮೇಹ ಸಮಸ್ಯೆಯನ್ನು ಕಟ್ಟಿಹಾಕಲು ಬೆಂಡೆಕಾಯಿ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತದೆ. ಹಾಗಾದ್ರೆ ಈ ಬೆಂಡೆಕಾಯಿಯಲ್ಲಿ ಅಂತಹ ಪ್ರಯೋಜನಗಳು ಏನೆಲ್ಲಾ ಅಡಗಿದೆ ಎನ್ನುವುದನ್ನು ನೋಡೋಣ ಬನ್ನಿ..
ವಿಟಮಿನ್ ಬಿ ಇದೆ
ಬೆಂಡೆಕಾಯಿಯಲ್ಲಿ ನಮ್ಮ ದೇಹಕ್ಕೆ ಬೇಕು ಎನಿಸುವಂತಹ ಬಹುತೇಕ ಪೌಷ್ಟಿಕ ಸತ್ವಗಳು ಸಿಗುತ್ತವೆ. ಅವುಗಳಲ್ಲಿ ವಿಟಮಿನ್ ಬಿ6 ಸಹ ಒಂದು. ಇದರ ಜೊತೆಗೆ ಕಬ್ಬಿಣದ ಅಂಶ ಮತ್ತು ನಾರಿನ ಪ್ರಮಾಣ ಕೂಡ ಇರುವುದರಿಂದ ನ್ಯೂರೋಪತಿ ಹೆಚ್ಚಾಗುವ ಸಾಧ್ಯತೆಯನ್ನು ತಡೆಯುತ್ತದೆ ಜೊತೆಗೆ ಹೋಮೊಸಿಸ್ಟೀನೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಕಾರಣದಿಂದ ಮಧುಮೇಹ ಕಂಟ್ರೋಲ್ ನಲ್ಲಿ ಉಳಿಯುತ್ತದೆ ಎಂದು ಹೇಳಬಹುದು.
ಗ್ಲೈಸೆಮಿಕ್ ಸೂಚ್ಯಂಕದ ರಹಸ್ಯ
ಬೆಂಡೆಕಾಯಿಯಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆ ಇದೆ ಎಂದು ಹೇಳುತ್ತಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಬೇರೆ ಬೇರೆ ಆಹಾರ ಪದಾರ್ಥಗಳು ಯಾವ ರೀತಿ ಪ್ರಭಾವ ಬೀರಿ ಹೆಚ್ಚು ಕಡಿಮೆ ಮಾಡುತ್ತವೆ ಎಂಬುದನ್ನು ತಿಳಿಸುವ ಒಂದು ಸಂಖ್ಯೆ ಎಂದರೆ ಅದು ಗ್ಲೈಸೆಮಿಕ್ ಸೂಚ್ಯಂಕ ಆಗಿದೆ. ಯಾವ ಆಹಾರ ಪದಾರ್ಥಗಳಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ ಅಂತಹವುಗಳು ಮಧುಮೇಹಿಗಳಿಗೆ ಆರೋಗ್ಯಕರ ಎಂದು ತಿಳಿಯಲಾಗಿದೆ. ಬೆಂಡೆಕಾಯಿಯನ್ನು ಈ ವಿಚಾರದಲ್ಲಿ ನಂಬಬಹುದು.
ನಾರಿನಾಂಶ ನೋಡುವುದಾದರೆ.
ಬೆಂಡೆಕಾಯಿಯಲ್ಲಿ ಕರಗುವ ಮತ್ತು ಕರಗದೆ ಇರುವ ಎರಡು ಪ್ರಮಾಣದ ನಾರಿನ ಅಂಶಗಳು ಇವೆ. ಅಂದರೆ ರಕ್ತಕ್ಕೆ ಸಕ್ಕರೆ ಪ್ರಮಾಣ ಬಿಡುಗಡೆಯಾಗಲು ನಾರಿನ ಅಂಶ ಸ್ವಲ್ಪ ಹೆಚ್ಚಿಗೆ ಸಮಯ ತೆಗೆದುಕೊಂಡು ಬಿಡುಗಡೆ ಮಾಡುತ್ತದೆ.
ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆ ಕಾಣುವುದಿಲ್ಲ. ನೀವು ನಾರಿನ ಅಂಶ ಹೆಚ್ಚಾಗಿರುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ಪಡೆದುಕೊಳ್ಳಬಹುದು. ಅಂದರೆ ಹೊಟ್ಟೆ ಹಸಿವು ಆಗುವುದಿಲ್ಲ. ಜೊತೆಗೆ ಇನ್ಸುಲಿನ್ ಸಂಬಂಧಿತ ತೊಂದರೆಗಳು ಸಹ ಇರುವುದಿಲ್ಲ. ಇದರಿಂದ ಸುಲಭವಾಗಿ ತೂಕ ನಿಯಂತ್ರಣ ಸಹ ಮಾಡಿಕೊಳ್ಳಬಹುದು.
ಕ್ಯಾಲೋರಿಗಳು ಕಡಿಮೆ ಇವೆ
100ಗ್ರಾಂ ಬೆಂಡೆಕಾಯಿ ತನ್ನಲ್ಲಿ 33 ಕ್ಯಾಲೊರಿಗಳನ್ನು ಒಳಗೊಂಡಿದೆ. ಇದರಿಂದ ನೀವು ನಿಮ್ಮ ದೇಹದ ತೂಕದ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆರೋಗ್ಯಕರವಾದ ತೂಕ ನಿರ್ವಹಣೆಯಲ್ಲಿ ಕೂಡ ಇದು ನೆರವಾಗುತ್ತದೆ. ನಿಯಮಿತವಾಗಿ ಆಗಾಗ ಬೆಂಡೆಕಾಯಿಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ ಮತ್ತು ಇದರಿಂದ ಮಧುಮೇಹ ಸಹ ಕಂಟ್ರೋಲ್ ಆಗುತ್ತದೆ.