ಹುಬ್ಬಳ್ಳಿ : ರಾಜ್ಯ ಸರ್ಕಾರದ ಮಹಾತ್ವಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಹುಬ್ಬಳ್ಳಿ ಗ್ರಾಮೀಣ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಾನಂದ ಭೂಮಣ್ಣವರ ಹೇಳಿದರು.
ಇಂದು ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆಯಡಿ ಜನರಿಗೆ ಸಮಪರ್ಕವಾಗಿ ಪಡಿತರವನ್ನು ವಿತರಣೆ ಮಾಡುವ ಹೊಣೆ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ. ಸರ್ಕಾರದಿಂದ ಉಚಿತವಾಗಿ ಪಡಿತರವನ್ನು ನೀಡಲಾಗುತ್ತದೆ. ಅದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಬೇಕು.
ಈಗಾಗಲೇ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪಡಿತರ ಚೀಟಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗುವುದು. ಅಲ್ಲದೇ ರಾಜ್ಯ ಸರ್ಕಾರದಿಂದ ಪ್ರತಿ ಬಿಪಿಎಲ್ ಕಾರ್ಡ್ ಸದಸ್ಯರಿಗೆ ರೂ.170 ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಗೃಹ ಲಕ್ಷ್ಮಿ ಯೋಜನೆಯು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿದೀಪವಾಗಿದೆ.
ಮಲಗುವ ಮುನ್ನ ಹಾಲು, ಬೆಲ್ಲ ಸೇವಿಸಿದರೆ ಹಲವು ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ!
ಈ ಯೋಜನೆಯ ಹಣದಿಂದ ಮಹಿಳೆಯರು ಹೊಲಿಗೆ ಯಂತ್ರ ಖರೀದಿ, ಹಸು ಖರೀದಿ, ಬಟ್ಟೆ ವ್ಯಾಪಾರ, ಔಷಧಿ ಖರೀದಿ ಸೇರಿದಂತೆ ನಾನಾ ಬಗೆಯಲ್ಲಿ ಬಳಕೆ ಆಗುತ್ತಿದೆ. ಕೆಲವು ಮಹಿಳೆಯರಿಗೆ ಗೃಹ ಲಕ್ಷ್ಮಿ ಹಣ ಜಮೆ ಆಗದಿರುವುದರ ಬಗ್ಗೆ ದೂರುಗಳು ಕೇಳಿ ಬಂದಿವೆ. ಅವುಗಳನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದರು.
ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು. ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಜನರು ಹೆಚ್ಚಾಗಿ ಪ್ರಯಾಣಿಸುವುದರಿಂದ ಬಸ್ಗಳ ಓಡಾಟದಲ್ಲಿ ಹೆಚ್ಚಳವಾಗಬೇಕಾಗಿದೆ ಎಂದರು.
ಗೃಹ ಜ್ಯೋತಿ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಮಳೆಗಾಲದ ನಂತರ ಕಂಬಗಳು ಉರುಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ವಿದ್ಯುತ್ ಕಂಬಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯುವ ನಿಧಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಸಭೆಗೆ ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ವಾಚಿಸಿದರು.
ಸಭೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜಿ ಜೆ.ಬಿ.ಮಜ್ಜಗಿ, ಹುಬ್ಬಳ್ಳಿ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ, ಹುಬ್ಬಳ್ಳಿ ಗ್ರಾಮೀಣ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಪ್ರದೀಪ ದ್ಯಾಮಕ್ಕನವರ, ಮಂಜುನಾಥ ಗಾಣಿಗೇರ, ರಜೆಯದ್ದೀನ ಮುಲ್ಲಾ, ಶಿವಕ್ಕ ಬಂಗಾರಬಳಿ, ಮಲ್ಲಿಕಾರ್ಜುನಗೌಡ ಭರಮಗೌಡ್ರ, ಸಿದ್ಧಾರ್ಥ ಮಲ್ಲಮ್ಮನವರ, ಸುರೇಶ ಸಾಳ, ಹನುಮಂತಗೌಡ ರಾಯನಗೌಡ್ರ, ಗುರುಶಾಂತ ಪಾಟೀಲ, ಬಸವ್ವ ತಳವಾರ, ಕುಮಾರ ತೋಟದ, ಇಮಾಮಸಾಬ ಪೀರಖಾನ, ಬಸಪ್ಪ ನರೇಗಲ್ಲ, ಮಂಜುನಾಥ ಗೋಜಿನೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.