ಚನ್ನಪಟ್ಟಣ:- ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜಿಲ್ಲೆಯಲ್ಲೆಡೆ ಬರ ಆವರಿಸಿದ್ದು, ಕೃಷಿ, ರೇಷ್ಮೇ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ರೈತರಿಗೆ ನೆರವಾಗಬೇಕು ಎಂದರು.
ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಲಭ್ಯ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಕೆಲಸಗಳಿಗೆ ಅಡ್ಡಿಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಾಮಾಣಿತೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ನಾನು ಎಂದಿಗೂ ಕಾನೂನು ಬಾಹಿರ ಕೆಲಸ ಮಾಡಲು ಅವಕಾಶ ನೀಡಿಲ್ಲ. ಹಿಂದೆ ಹೇಗೆ ಕೆಲಸ ಮಾಡಿದಿರೋ ಗೊತ್ತಿಲ್ಲ, ಇನ್ನು ಮುಂದೆ ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುವುದೇ ಕಂದಾಯ ಇಲಾಖೆಯಲ್ಲಿ. ಕಂದಾಯ ಇಲಾಖೆ ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ. ಲಂಚಕ್ಕಾಗಿ ಪೀಡಿಸದೇ ಅವರ ಸಂಕಷ್ಟ ಅರಿತು ಕೆಲಸ ಕಾರ್ಯಗಳನ್ನು ತ್ವರಿವಾಗಿ ಮಾಡಿಕೊಡಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಬಹುತೇಕ ಸಮಸ್ಯೆಗಳಿಗೆ ಪಿಡಿಒಗಳೇ ನೇರ ಕಾರಣಕರ್ತರಾಗಿದ್ದಾರೆ. ಜನರ ಕೆಲಸ ಮಾಡಿಕೊಡದೇ ಜನರನ್ನು ಅಲೆದಾಡಿಸುವ ಜತೆಗೆ ರಾಜಕೀಯ ಮಾಡಿಕೊಂಡು ತಿರುಗುತ್ತಾರೆ. ತಹಸೀಲ್ದಾರ್ ಹಾಗೂ ತಾಪಂ ಇಒ, ಪಿಡಿಒಗಳ ಕಾರ್ಯವೈಖರಿಗಳಿಗೆ ಕಡಿವಾಣ ಹಾಕಬೇಕು. ಪಿಡಿಒಗಳನ್ನು ಬಿಗಿ ಮಾಡಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಬೇಕು ಎಂದು ಸೂಚಿಸಿದರು