ಬೆಂಗಳೂರು: ಭಾರತ ದೇಶದಲ್ಲಿ ಮೀಸಲಾತಿ (Reservation In India) ಬಗ್ಗೆ ಅಮೆರಿಕದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ (Bengaluru) ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಜೆಪಿ ನಾಯಕರಿಂದು ದೂರು ನೀಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy), ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್, ತೇಲ್ಕೂರ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್ ಸೇರಿ ಬಿಜೆಪಿ ನಾಯಕರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧ ಈಗ ದೂರು ದಾಖಲಿಸಿದ್ದೇವೆ. ತಕ್ಷಣ ಅವರ ವಿರುದ್ಧ ಎಫ್ಐಆರ್ (FIR) ದಾಖಲಿಸಿ ಕ್ರಮ ಜರುಗಿಸಬೇಕು. ಐಟಿ ಕಾಯ್ದೆಯಲ್ಲೂ ರಾಹುಲ್ ಗಾಂಧಿ ಹೇಳಿಕೆ ಅಪರಾಧವಾಗಿದ್ದು, ಈ ಪ್ರಕರಣದಲ್ಲಿ ಎಫ್ಐಆರ್ ಹಾಕಲೇಕಾಗುತ್ತದೆ. ವಿಜಯಪುರ, ಬೀದರ್ನಲ್ಲೂ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹೊರ ರಾಜ್ಯಗಳಲ್ಲೂ ದೂರು ದಾಖಲಾಗ್ತಿದೆ ಎಂದು ಹೇಳಿದ್ದಾರೆ.